ಪ್ರಧಾನಿ ಮೋದಿಯೊಂದಿಗೆ ಟಿವಿ ಚರ್ಚೆಯಲ್ಲಿ ಭಾಗವಹಿಸುವ ಇಂಗಿತ ವ್ಯಕ್ತಪಡಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್: ಉಭಯ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರದರ್ಶನದಲ್ಲಿ ಚರ್ಚೆ ನಡೆಸಲು ನಾನು ಬಯಸುತ್ತೇನೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
"ನರೇಂದ್ರ ಮೋದಿ ಅವರೊಂದಿಗೆ ಟಿವಿಯಲ್ಲಿ ಚರ್ಚೆ ಮಾಡಲು ನಾನು ಇಷ್ಟಪಡುತ್ತೇನೆ. ಭಿನ್ನಾಭಿಪ್ರಾಯಗಳನ್ನು ಚರ್ಚೆಯ ಮೂಲಕ ಪರಿಹರಿಸಿದರೆ ಭಾರತ ಉಪಖಂಡದ ಶತಕೋಟಿ ಜನರಿಗೆ ಪ್ರಯೋಜನಕಾರಿ" ಎಂದು ಇಮ್ರಾನ್ ಖಾನ್ ರಷ್ಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಪಾಕ್ ಪ್ರಧಾನಿಯ ಈ ಹೇಳಿಕೆಗೆ ವಿದೇಶಾಂಗ ಸಚಿವಾಲಯದಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ ಎಂದು ndtv.com ವರದಿ ಮಾಡಿದೆ.
ಇತ್ತೀಚೆಗಷ್ಟೇ, ಭಯೋತ್ಪಾದನೆ ಹಾಗೂ ಮಾತುಕತೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ, ಗಡಿಯಾಚೆ ನಡೆಯುವ ಭಯೋತ್ಪಾದನೆಯನ್ನು ಹತ್ತಿಕ್ಕುವಂತೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅನಧಿಕೃತವಾಗಿ ನೆಲೆಸಿರುವ ಭಯೋತ್ಪಾದಕರನ್ನು ಶಿಕ್ಷಿಸುವಂತೆ ಪಾಕಿಸ್ತಾನಕ್ಕೆ ಭಾರತ ಆಗ್ರಹಿಸಿತ್ತು.





