ಮಂಗಳೂರು: ಭವಿಷ್ಯನಿಧಿ ಕಚೇರಿ ಮುಂದೆ ಎಐಟಿಯುಸಿ ಪ್ರತಿಭಟನೆ

ಮಂಗಳೂರು: ಕಾರ್ಮಿಕ ಭವಿಷ್ಯನಿಧಿ ಇಲಾಖೆಯ ಅವ್ಯವಸ್ಥೆಗಳನ್ನು ವಿರೋಧಿಸಿ ಎಐಟಿಯುಸಿ ನೇತೃತ್ವದ ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್ ವತಿಯಿಂದ ಮಂಗಳವಾರ ನಗರದ ಕಾರ್ಮಿಕ ಭವಿಷ್ಯನಿಧಿ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು.
ಇಲಾಖೆಯ ಅವ್ಯವಸ್ಥೆಯಿಂದಾಗಿ ಚಂದಾದಾರ ಕಾರ್ಮಿಕರಿಗೆ, ಪಿಂಚಣಿದಾರರಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಸಲ್ಲಿಸುವ ಮನವಿಯನ್ನು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಪ್ರತಿಭಟನಾ ನಿರತರ ಬಳಿ ಆಗಮಿಸಿ ಸ್ವಿಕರಿಸಬೇಕೆಂದು ಪಟ್ಟು ಹಿಡಿದರು. ಆದರೆ ಆಯುಕ್ತರು ಅದಕ್ಕೆ ಒಪ್ಪದಿದ್ದಾಗ ಕಾರ್ಮಿಕರು ಆಕ್ರೋಶಿತರಾಗಿ ಕಚೇರಿಯ ಆವರಣದೊಳಗೆ ನುಗ್ಗಿದರು. ಅಷ್ಟರಲ್ಲಿ ಆಯುಕ್ತರು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಅಲ್ಲದೆ ಆನ್‌ಲೈನ್ ಸಹಾಯ ಡೆಸ್ಕ್ ಸ್ಥಾಪಿಸಿ ಉಚಿತ ಸೇವೆ ನೀಡಲು ಅಧೀನ ಅಧಿಕಾರಿಗಳಿಗೆ ಸೂಚಿಸಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ವಿ. ರಾವ್ ಮಾತನಾಡಿ ಭವಿಷ್ಯನಿಧಿ ವಿಶ್ವಸ್ಥ ಮಂಡಳಿಯಡಿ ಭವಿಷ್ಯನಿಧಿ ಸಂಘಟನೆ ಕಾರ್ಯನಿವರ್ಹಿಸುತ್ತಿದ್ದರೂ ಇಲಾಖೆಯು ಕಾರ್ಮಿಕರಲ್ಲಿ ವಿಶ್ವಾಸ ಕಳೆದುಕೊಂಡು ಸತಾಯಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಹಾಗೂ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ವಿ.ಎಸ್. ಬೇರಿಂಜ ಮಾತನಾಡಿ ಡಿಜಿಟಲ್ ಇಂಡಿಯಾದಂತೆ ಭವಿಷ್ಯನಿಧಿ ಇಲಾಖೆ ಕೂಡಾ ತನ್ನ ವ್ಯವಹಾರಗಳನ್ನು ಅಂತರ್ಜಾಲದ ಮೂಲಕ ನಿರ್ವಹಿಸಲು ಶುರು ಮಾಡಿತು. ಆದರೆ ಇಂಟರ್‌ನೆಟ್, ಸರ್ವರ್ ಮತ್ತಿತರ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ. ಇಲಾಖೆಯ ಸರಕಾರವೇ ಆಧಾರ್ ಗುರುತನ್ನು ಅಂತಿಮಗೊಳಿಸಿದೆ. ಆದರೆ ಭವಿಷ್ಯನಿಧಿ ಇಲಾಖೆಯು ಇದನ್ನು ಪರಿಪೂರ್ಣವಾಗಿ ಒಪ್ಪದಿರುವುದು ವಿಪರ್ಯಾಸ. ಆಧಾರ್ ನೀಡಲಿಲ್ಲ ಅಥವಾ ವಿವರಗಳು ಸರಿಯಿಲ್ಲ ಎಂಬ ಕಾರಣಕ್ಕೆ ಚಂದಾದಾರ ಕಾರ್ಮಿಕರ ಹೆಸರನ್ನೇ ತೆಗೆದು ಹಾಕಿರುವುದು ವಿಶ್ವಾಸದ್ರೋಹವಾಗಿದೆ ಎಂದರು.
ಬಂಟ್ವಾಳ ತಾಲೂಕು ಬೀಡಿ ಆ್ಯಂಡ್ ಜನರಲ್ ಲೇಬರ್ ಯೂನಿಯನ್ (ಎಐಟಿಯುಸಿ) ಕಾರ್ಯದರ್ಶಿ ಬಿ.ಶೇಖರ್ ಮಾತನಾಡಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಕರಾವಳಿ ಬೀಡಿ ಗುತ್ತಿಗೆದಾರರ ಸಂಘಟನೆಯ ಮುಖಂಡ ಅಬ್ದುಲ್ ಖಾದರ್ ಕಿನ್ನಿಗೋಳಿ, ಎಐಟಿಯುಸಿ ಜಿಲ್ಲಾ ಜೊತೆ ಕಾರ್ಯದರ್ಶಿ ಎಂ. ಕರುಣಾಕರ್, ಎಐಟಿಯುಸಿ ನಾಯಕರಾದ ಬಾಬು ಭಂಡಾರಿ ಬಂಟ್ವಾಳ, ಬಿ.ಎಂ.ಹಸೈನಾರ್ ವಿಟ್ಲ, ಶಶಿಕಲಾ ಗಿರೀಶ್ ಉಡುಪಿ, ಸುಚಿತ್ರಾ ಉಡುಪಿ, ಸರಸ್ವತೀ ಕೆ., ಸುಲೋಚನಾ ಕವತ್ತಾರು, ಸರೋಜಿನಿ ಕೂರಿಯಾಳ, ಹರ್ಷಿತ್ ಬಂಟ್ವಾಳ, ಮಮತಾ ಬಿಸಿರೋಡ್, ಕೇಶವತಿ ಬಂಟ್ವಾಳ, ಫಾತಿಮಾ ಪಂಜಿಮೊಗರು, ಇಂದಿರಾ ಪಂಜಿಮೊಗರು, ಸಂಜೀವಿ ಹಳೆಯಂಗಡಿ, ಬೀಡಿ ಗುತ್ತಿಗೆದಾರರಾದ ಕೆ.ಎಚ್. ಶರೀಫ್ ಬಜ್ಪೆ, ರಾಷ್ಟ್ರೀಯ ಮಹಿಳಾ ಒಕ್ಕೂಟದ ಭಾರತಿ ಪ್ರಶಾಂತ್, ಎಐವೈಎಫ್ ಸಂಘಟನೆಯ ಜಗತ್ಪಾಲ್ ಕೋಡಿಕಲ್, ಕೃಷ್ಣಪ್ಪವಾಮಂಜೂರು, ಸುಧಾಕರ್ ಕಲ್ಲೂರು, ದಿನೇಶ್ ಅಮ್ಟಾಡಿ, ಪಾಲ್ಗೊಂಡಿದ್ದರು.