ಉಡುಪಿ: ಕೋವಿಡ್ಗೆ ಇಬ್ಬರು ಬಲಿ; 15 ಮಂದಿಗೆ ಸೋಂಕು ದೃಢ
ಸಾಂದರ್ಭಿಕ ಚಿತ್ರ (PTI)
ಉಡುಪಿ, ಫೆ.22: ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ಗೆ ಇಬ್ಬರು ಹಿರಿಯ ನಾಗರಿಕರು ಬಲಿಯಾಗಿದ್ದಾರೆ. ದಿನದಲ್ಲಿ 15 ಮಂದಿ ಕೊರೋನಕ್ಕೆ ಪಾಸಿಟಿವ್ ಬಂದಿದ್ದಾರೆ. 59 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಸದ್ಯ ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿರುವವರ ಸಂಖ್ಯೆ 141ಕ್ಕಿಳಿದಿದೆ.
ದಿನದಲ್ಲಿ ಉಡುಪಿಯ 75 ವರ್ಷದ ಹಾಗೂ ಕುಂದಾಪುರದ 86 ವರ್ಷ ಪ್ರಾಯದ ಪುರುಷರು ಮೃತಪಟ್ಟಿದ್ದಾರೆ. ಈ ಮೂಲಕ ಕಳೆದ ಜ.1ರ ಬಳಿಕ ಕೋವಿಡ್ಗೆ ಬಲಿಯಾದವರ ಸಂಖ್ಯೆ 50ಕ್ಕೇರಿದ್ದು, ಒಟ್ಟಾರೆಯಾಗಿ 542 ಮಂದಿ ಮೃತಪಟ್ಟಿದ್ದಾರೆ. ಕೋವಿಡ್ ಗುಣಲಕ್ಷಣದೊಂದಿಗೆ ಇತರ ಸಮಸ್ಯೆಗಳಿದ್ದ ಇಬ್ಬರು ಖಾಸಗಿ ಆಸ್ಪತ್ರೆಗಳಲ್ಲಿ ಕ್ರಮವಾಗಿ ಜ.31 ಹಾಗೂ ಫೆ.20ರಂದು ಮೃತಪಟ್ಟಿದ್ದಾರೆ.
ಇಂದು ಪಾಸಿಟಿವ್ ಬಂದ 15 ಮಂದಿಯಲ್ಲಿ ಎಂಟು ಮಂದಿ ಪುರುಷರು ಹಾಗೂ ಏಳು ಮಂದಿ ಮಹಿಳೆಯರು. ಇವರಲ್ಲಿ 10 ಮಂದಿ ಉಡುಪಿ ತಾಲೂಕಿಗೆ, ಇಬ್ಬರು ಕುಂದಾಪುರ ಹಾಗೂ ಒಬ್ಬರು ಕಾರ್ಕಳ ತಾಲೂಕಿಗೆ ಸೇರಿದವರು. ಉಳಿದಿಬ್ಬರು ಹೊರಜಿಲ್ಲೆಯವರು. ಪಾಸಿಟಿವ್ ಬಂದವರಲ್ಲಿ 24 ಮಂದಿ ಈಗ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ 59 ಮಂದಿ ರೋಗಮುಕ್ತರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 18,285ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 780 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 18,333ಕ್ಕೇರಿದೆ.
2310 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು 2310 ಕೋವಿಡ್ಗಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 263 ಮಂದಿ ಹಿರಿಯ ನಾಗರಿಕರು ಸೇರಿದಂತೆ ಒಟ್ಟು 304 ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ಪಡೆದರೆ 49 ಮಂದಿ ಮೊದಲ ಡೋಸ್ ಹಾಗೂ 1957 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15ರಿಂದ 18 ವರ್ಷದೊಳಗಿನ 15 ಮಂದಿ ಮೊದಲ ಡೋಸ್ ಹಾಗೂ 1267 ಮಂದಿ ಎರಡನೇ ಡೋಸ್ನ್ನು ಇಂದು ಪಡೆದುಕೊಂಡಿದ್ದಾರೆ.