ವಿಧಾನ ಪರಿಷತ್ತಿನಲ್ಲಿ ನಾಲ್ಕು ವಿಧೇಯಕಗಳಿಗೆ ಅಂಗೀಕಾರ

ಬೆಂಗಳೂರು, ಫೆ. 22: ವಿಧಾನಸಭೆಯಿಂದ ಅಂಗೀಕಾರವಾಗಿದ್ದ ಕರ್ನಾಟಕ ಸಿವಿಲ್ ಸೇವೆಗಳ (2011ನೆ ಸಾಲಿನ) ಗೆಜೆಟೆಡ್ ಆಯ್ಕೆ ಮತ್ತು ನೇಮಕಾತಿಯನ್ನು ಸಿಂಧುಗೊಳಿಸುವಿಕೆ ವಿಧೇಯಕ ಸೇರಿದಂತೆ 4 ಮಹತ್ವದ ವಿಧೇಯಕಗಳಿಗೆ ವಿಧಾನ ಪರಿಷತ್ತಿನಲ್ಲಿಂದು ಅಂಗೀಕಾರ ದೊರೆಯಿತು.
ಕೆಪಿಎಸ್ಸಿ ಮೂಲಕ 2011 ರಲ್ಲಿ ಆಯ್ಕೆಯಾಗಿದ್ದ 362 ಗ್ರೂಪ್-1 ಮತ್ತು 2 ಹುದ್ದೆಗಳಿಗೆ ಆಯ್ಕೆಯಾಗಿ ನ್ಯಾಯಾಲಯಗಳಲ್ಲಿ ವಿವಿಧ ಹಂತಗಳಲ್ಲಿ ಅಸಿಂಧು, ತಡೆಯಾಜ್ಞೆಗೊಂಡಿದ್ದ ಅಭ್ಯರ್ಥಿಗಳನ್ನು ಮಾನವೀಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಉದ್ದೇಶಿಸಿರುವ ಮಸೂದೆಯನ್ನು ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮಂಡಿಸಿ, ಪರ್ಯಾಲೋಚಿಸುವಂತೆ ಮನವಿ ಮಾಡಿದರು.
ಬಳಿಕ ಜೆಡಿಎಸ್‍ನ ಕೆ.ಟಿ.ಶ್ರೀಕಂಠೇಗೌಡ, ತಿಪ್ಪೇಸ್ವಾಮಿ, ಬಿಜೆಪಿಯ ಎಸ್.ಸಿ.ಸಂಕನೂರು, ರುದ್ರೇಗೌಡ, ರವಿಕುಮಾರ್, ಹನುಮಂತಪ್ಪ ನಿರಾಣಿ ಮತ್ತಿತರರು ವಿಧೇಯಕವನ್ನು ಸ್ವಾಗತಿಸಿ, ಇದೊಂದು ಮಾನವೀಯ ಕೆಲಸ ಎಂದು ಸರಕಾರವನ್ನು ಅಭಿನಂದಿಸಿದರು. ನಂತರ ಸಭಾಪತಿ ಬಸವರಾಜ ಹೊರಟ್ಟಿ ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರೆಯಿತು.
ಅದೇರೀತಿ, ಗೃಹ ಸಚಿವರ ಪರವಾಗಿ ಸಚಿವ ಮಾಧುಸ್ವಾಮಿ ಮಂಡಿಸಿದ ಕ್ರಿಮಿನಲ್ ಕಾನೂನು ತಿದ್ದುಪಡಿ ಅಧ್ಯಾದೇಶ 1944 ಕರ್ನಾಟಕ ತಿದ್ದುಪಡಿ ವಿಧೇಯಕ 2022ಕ್ಕೂ ಕೂಡಾ ಸಭಾಪತಿ ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರೆಯಿತು.
ಕಂದಾಯ ಸಚಿವ ಆರ್.ಅಶೋಕ್ ಮಂಡಿಸಿದ ಕರ್ನಾಟಕ ಸ್ಟಾಂಪ್ ತಿದ್ದುಪಡಿ ವಿಧೇಯಕ-2022 ಹಾಗೂ ಕರ್ನಾಟಕ ಸ್ಟಾಂಪ್ 2ನೆ ತಿದ್ದುಪಡಿ ವಿಧೇಯಕ 2022ಕ್ಕೆ ಯಾವುದೇ ಚರ್ಚೆಯಿಲ್ಲದೆ ಅಂಗೀಕಾರ ದೊರೆಯಿತು. ರಾಜ್ಯ ಸರಕಾರದ ಮಂತ್ರಿಗಳ ಭತ್ತೆ, ವೇತನ, ಪಿಂಚಣಿ ಪರಿಷ್ಕರಿಸುವ ವಿಧೇಯಕಕ್ಕೂ ಧ್ವನಿಮತದ ಅಂಗೀಕಾರ ದೊರೆಯಿತು.







