ಯುರೋಪ್ಗೆ ಅನಿಲ ಸರಬರಾಜು; ತಕ್ಷಣ ಬದಲಿ ವ್ಯವಸ್ಥೆ ಅಸಾಧ್ಯವೆಂದ ಖತರ್

ಸಾಂದರ್ಭಿಕ ಚಿತ್ರ
ದೋಹಾ: ಯುರೋಪ್ಗೆ ರಶ್ಯಾದಿಂದ ಪೂರೈಕೆಯಾಗುವ ದ್ರವೀಕೃತ ನೈಸರ್ಗಿಕ ಅನಿಲದ ಪ್ರಮಾಣದಷ್ಟನ್ನು ತಕ್ಷಣ ಪೂರೈಸುವ ಸಾಮರ್ಥ್ಯ ಖತರ್ಗೆ ಅಥವಾ ಇತರ ಯಾವುದೇ ದೇಶಕ್ಕೆ ಇಲ್ಲ ಎಂದು ಖತರ್ನ ಇಂಧನ ಸಚಿವ ಸಾದ್ ಅಲ್-ಕಾಬಿ ಹೇಳಿದ್ದಾರೆ.
ದೋಹಾದಲ್ಲಿ ನಡೆಯುತ್ತಿರುವ ಅನಿಲ ಸಮಾವೇಶದಲ್ಲಿ ಪಾಲ್ಗೊಂಡಿರುವ ಅವರು ಸುದ್ಧಿಗಾರರ ಜತೆ ಮಾತನಾಡಿದರು. ಯುರೋಪ್ಗೆ ಪೂರೈಕೆಯಾಗುವ ದ್ರವೀಕೃತ ನೈಸರ್ಗಿಕ ಅನಿಲ(ಎಲ್ಎನ್ಜಿ)ದ ಸುಮಾರು 40% ರಷ್ಟನ್ನು ರಶ್ಯಾ ಒದಗಿಸುತ್ತದೆ. ಈ ಪ್ರಮಾಣದ ಎಲ್ಎನ್ಜಿಯನ್ನು ಪೂರೈಸುವ ಸಾಮರ್ಥ್ಯ ಯಾವುದೇ ದೇಶಕ್ಕೆ ಇಲ್ಲ.
ರಶ್ಯಾ ಮಾಡಿಕೊಂಡಿರುವ ಬಹುತೇಕ ಎಲ್ಎನ್ಜಿ ವ್ಯವಹಾರ ಒಪ್ಪಂದ ದೀರ್ಘಾವಧಿಯದ್ದಾಗಿದೆ ಮತ್ತು ತಲುಪಬೇಕಿರುವ ಸ್ಥಳವನ್ನು ಒಪ್ಪಂದದಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದೆ. ಆದ್ದರಿಂದ ತಕ್ಷಣಕ್ಕೆ ಇಷ್ಟೊಂದು ಪ್ರಮಾಣದ ಪೂರೈಕೆಗೆ ಬದಲಿ ವ್ಯವಸ್ಥೆ ಮಾಡುವುದು ಬಹುತೇಕ ಅಸಾಧ್ಯ ಎಂದವರು ಹೇಳಿದ್ದಾರೆ.
ವಿಶ್ವದ ಅತ್ಯಧಿಕ ಎಲ್ಎನ್ಜಿ ಉತ್ಪಾದಕ ದೇಶಗಳಲ್ಲಿ ಒಂದೆನಿಸಿರುವ ಖತರ್ನಿಂದ ಏಶ್ಯಾದ ದೇಶಗಳಿಗೆ ಅಧಿಕ ಪ್ರಮಾಣದಲ್ಲಿ ಎಲ್ಎನ್ಜಿ ಪೂರೈಕೆಯಾಗುತ್ತಿದೆ. ಒಂದು ವೇಳೆ ರಶ್ಯಾದ ಮೇಲೆ ನಿರ್ಬಂಧ ವಿಧಿಸಿದರೆ, ಎಲ್ಎನ್ಜಿ ಪೂರೈಕೆಯನ್ನು ಯುರೋಪ್ನತ್ತ ಬದಲಿಸುವಂತೆ ಅಮೆರಿಕ ಇತ್ತೀಚೆಗೆ ಖತರ್ಗೆ ಮನವಿ ಮಾಡಿದೆ.
ಆದರೆ, ತನ್ನ ಬಹುತೇಕ ಒಪ್ಪಂದ ದೀರ್ಘಾವಧಿಯದ್ದು ಆಗಿರುವುದರಿಂದ ಒಟ್ಟು ಎಲ್ಎನ್ಜಿ ವ್ಯವಹಾರದ ಕೇವಲ 15% ದಷ್ಟನ್ನು ಮಾತ್ರ ಯುರೋಪ್ನತ್ತ ಬದಲಿಸಬಹುದು ಎಂದು ಖತರ್ ಸ್ಪಷ್ಟಪಡಿಸಿದೆ.
ಉಕ್ರೇನ್ನ 2 ಪ್ರದೇಶಗಳನ್ನು ಸ್ವತಂತ್ರ ಪ್ರದೇಶಗಳೆಂದು ಮಾನ್ಯ ಮಾಡುವುದಾಗಿ ರಶ್ಯಾ ಘೋಷಿಸಿರುವುದಕ್ಕೆ ಪ್ರತಿಯಾಗಿ ರಶ್ಯಾದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸುವುದಾಗಿ ಅಮೆರಿಕ ಹೇಳಿದೆ. ಆರ್ಥಿಕ ದಿಗ್ಬಂಧನ ಜಾರಿಗೊಂಡರೆ ರಶ್ಯಾದಿಂದ ಯುರೋಪ್ಗೆ ಎಲ್ಎನ್ಜಿ ಪೂರೈಕೆಗೆ ಅಡ್ಡಿಯಾಗಲಿದೆ.





