ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆದ್ದು ಅಧಿಕಾರ ಹಿಡಿಯೋದು ಭ್ರಮೆ: ಡಿಕೆಶಿ ವ್ಯಂಗ್ಯ

ಪಾಂಡವಪುರ, ಫೆ.22: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ವತಃ ಬಲದೊಂದಿಗೆ ಗೆದ್ದು ಅಧಿಕಾರ ಹಿಡಿಯೋದು ಭ್ರಮೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಪಟ್ಟಣದ ಟಿಎಪಿಸಿಎಂಎಸ್ ರೈತ ಸಂಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮಂಗಳವಾರ ಆಯೋಜಿಸಿದ್ದ ನಮ್ಮ ನೀರು ನಮ್ಮ ಹಕ್ಕು ಮೇಕೆದಾಟು ಪಾದಯಾತ್ರೆ ಪೂರ್ವಭಾವಿ ಸಭೆ ಹಾಗೂ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನರಿಗೆ ಯಾರನ್ನು ಬೇಕಾದರೂ ಸೋಲಿಸುವ ಮತ್ತು ಯಾರನ್ನು ಬೇಕಾದರೂ ಗೆಲ್ಲಿಸುವ ತಾಕತ್ತು ಇದೆ. ಕಳೆದ ವಿಧಾನ ಪರಿಷತ್ ಚುನವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್‍ನ ಆರು ಶಾಸಕರಿದ್ದರೂ ಅವರ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರ ನಡುವೆ ಕಾಂಗ್ರೆಸ್‍ನ ದಿನೇಶ್ ಗೂಳಿಗೌಡರು ಆಯ್ಕೆಯಾದರು. ಜನ ತೀರ್ಮಾನ ಮಾಡಿದರೆ ಏನೂ ಬೇಕಾದರೂ ಸಾಧ್ಯ ಎಂಬುದು ಇದರಿಂದ ತಿಳಿಯುತ್ತದೆ ಎಂದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ರೈತಸಂಘದವರು ಮಾತ್ರ ಶಾಸಕರಾಗಬೇಕೆ? ಕಾಂಗ್ರೆಸ್‍ನವರು ಆಗಬಾರದೇ? ಈ ಭಾರಿ ಚುನವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂಎಲ್‍ಎ ಖಂಡಿತವಾಗಿಯೂ ಆಗುತ್ತಾರೆ. ಅದು ಯಾರು ಆಗುತ್ತಾರೆ ಎಂಬುದು ಗೊತ್ತಿಲ್ಲ ಎಂದು ಮಾರ್ಮಿಕವಾಗಿ ಅವರು ಹೇಳಿದರು.
ರಾಜ್ಯದ ಜನರ ಹಿತಕ್ಕಾಗಿ ಮತ್ತು ಕುಡಿಯುವ ನೀರಿಗಾಗಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆಯೇ ಹೊರತು ಇದರಲ್ಲಿ ಯಾವುದೇ ರಾಜಕಾರಣದ ಉದ್ದೇಶ ಅಡಗಿಲ್ಲ. ಫೆ.27 ರಂದು ಮೇಕೆದಾಟು ಪಾದಯಾತ್ರೆ ಪುನರಾರಂಭವಾಗುತ್ತಿದ್ದು, ಪಾಂಡವಪುರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಕೃಷಿ ಮಾದರಿಯಲ್ಲಿ ರಾಜಕೀಯ ಮಾಡಿದರೆ ಯಶಸ್ಸು ಖಂಡಿತವಾಗಿ ದೊರೆಯುತ್ತದೆ. ಯಾವ ವ್ಯಕ್ತಿ ಅತಿ ಹೆಚ್ಚು ಮತದಾರರನ್ನು ಕಾಂಗ್ರೆಸ್‍ನ ಡಿಜಿಟಲ್ ಸದಸ್ಯತ್ವಕ್ಕೆ ನೋಂದಣಿ ಮಾಡಿಸುತ್ತಾನೋ ಹಾಗೂ ಮತದಾರರ ವಿಶ್ವಾಸ ಗಳಿಸಿರುತ್ತಾನೋ ಅವರಿಗೆ ಕ್ಷೇತ್ರದ ಟಿಕೇಟ್ ನೀಡಲಾಗುವುದು ಎಂದು ಅವರು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ರಮೇಶ್‍ಬಾಬು ಬಂಡಿಸಿದ್ದೇಗೌಡ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೊನಗಾನಹಳ್ಳಿ ಕಿಟ್ಟಿ, ಸಂಪಹಳ್ಳಿ ಉಮೇಶ್, ಮಹಿಳಾ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್, ಕೆಪಿಸಿಸಿ ಡಿಜಿಟಲ್ ಸದಸ್ಯತ್ವ ನೋಂದಣಿ ಉಸ್ತುವಾರಿ ಐಶ್ವರ್ಯ ಮಹದೇವು, ಮುಖಂಡರಾದ ರವಿಬೋಜೇಗೌಡ, ಎಚ್.ತ್ಯಾಗರಾಜು, ಎಲ್.ಡಿ.ರವಿ, ಎಚ್.ಎನ್.ರವೀಂದ್ರ ಇತರರು ಉಪಸ್ಥಿತರಿದ್ದರು.







