ಕೊಲೆಗಡುಕರನ್ನು ಕೂಡಲೇ ಬಂಧಿಸಿ: ಸೌಹಾರ್ದತೆ ಕಾಪಾಡಿಕೊಳ್ಳಲು ಎಸ್‍ಯುಸಿಐ ಮನವಿ
ಬೆಂಗಳೂರು, ಫೆ. 22: ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಸಂಘ ಪರಿವಾರದ ಕಾರ್ಯಕರ್ತನ ಕೊಲೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಎಸ್‍ಯುಸಿಐ, ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆದು ಅಪರಾಧಿಗಳಿಗೆ ಕಾನೂನುರೀತ್ಯಾ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದೆ.
‘ಕೋಮು ಸೂಕ್ಷ್ಮ ಸಂದರ್ಭದಲ್ಲಿ ಮೃತದೇಹದ ಮೆರವಣಿಗೆಗೆ ಅವಕಾಶ ನೀಡಿದ್ದು, ಪೊಲೀಸರ ಬೇಜವಾಬ್ದಾರಿತನದ ಪರಾಕಾಷ್ಠೆ. ಮಾಧ್ಯಮಗಳಲ್ಲಿ ವರದಿಯಾದಂತೆ ಪೊಲೀಸರು ಒತ್ತಡಕ್ಕೆ ಒಳಗಾಗಿದ್ದೆ ನಿಜವಾದರೆ, ಅದರ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ಆದರೆ, ಸರಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು, ಶಾಸಕರು, ಸಂಸದರು ಇಂತಹ ಸಂದರ್ಭದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಪರಿಣಾಮ ಬೀರಿದೆ. ಗಲಭೆಯ ಅಮಾಯಕ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು' ಎಂದು ಎಸ್‍ಯುಸಿಐ ಕಾರ್ಯದರ್ಶಿ ಕೆ.ಉಮಾ ಆಗ್ರಹಿಸಿದ್ದಾರೆ.
‘ಕೊಲೆಗಡುಕರು ಯಾವ ಕೋಮಿಗೆ ಸೇರಿದ್ದರೂ ಅವರು ಅಪರಾಧಿಗಳೇ. ಈ ವಿದ್ಯಮಾನವನ್ನು ಬಳಸಿ ಕೋಮು ವಿದ್ವೇಷ ಹರಡುವುದೂ ಅಪರಾಧವೇ. ರಾಜ್ಯದ ದುಡಿಯುವ ವರ್ಗ, ರೈತರು ಮತ್ತು ಮಧ್ಯಮ ವರ್ಗದ ಜನತೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಗಳಿಗೆಯಲ್ಲಿ ಅವುಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ಬದಲು ಕೋಮುದ್ವೇಷದ ವಾತಾವರಣ ಸ್ವಯಂ ನಾಶಕ್ಕೆ ಕಾರಣವಾಗುತ್ತದೆ ಎಂಬುದನ್ನು ಮರೆಯಲಾಗದು. ಯಾವುದೇ ಪ್ರಚೋದನೆಗೆ ಒಳಗಾಗದೆ ಶಾಂತಿ-ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.







