ನಾಗೇಶ್ ಹೆಗಡೆ ಸಹಿತ 14 ಸಾಧಕರು, ಒಂದು ಸಂಸ್ಥೆ, ಒಂದು ಪತ್ರಿಕೆಗೆ ಸಂದೇಶ ಪ್ರಶಸ್ತಿ ಪ್ರದಾನ

ಮಂಗಳೂರು, ಫೆ.22: ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ 2020-21 ಮತ್ತು 2021-22ನೇ ಸಾಲಿನ ರಾಜ್ಯ ಮಟ್ಟದ ಪ್ರತಿಷ್ಠಿತ ಸಂದೇಶ ಪ್ರಶಸ್ತಿಯನ್ನು ವಿವಿಧ ಕ್ಷೇತ್ರದ 14 ಮಂದಿ ಸಾಧಕರು ಮತ್ತು ಒಂದು ಸಂಘಟನೆ ಹಾಗೂ ಒಂದು ಪತ್ರಿಕೆಗೆ ನಗರದ ಬಜ್ಜೋಡಿಯ ಪ್ರೇಮನಗರದ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
2020-21ನೆ ಸಾಲಿನ ಸಂದೇಶ ಮಾಧ್ಯಮ ಪ್ರಶಸ್ತಿಯನ್ನು ನಾಗೇಶ ಹೆಗಡೆ, ಕೊಂಕಣಿ ಸಂಗೀತ ಪ್ರಶಸ್ತಿಯನ್ನು ಮೀನ ರೆಬಿಂಬಸ್, ಕಲಾ ಪ್ರಶಸ್ತಿಯನ್ನು ಅವಿತಾಸ್ ಎಡೋಲ್ಫಸ್ ಕುಟಿನ್ಹಾ, ಶಿಕ್ಷಣ ಪ್ರಶಸ್ತಿಯನ್ನು ಡಾ.ಲಕ್ಷ್ಮಣ್ ಸಾಬ್ ಚೌರಿ (ಬಾಗಲಕೋಟೆ) ಅವರಿಗೆ ಪ್ರದಾನ ಮಾಡಲಾಯಿತು. ಅಲ್ಲದೆ ಕೊಂಕಣಿ ಸಾಹಿತ್ಯ ಪ್ರಶಸ್ತಿಯನ್ನು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ಸಂಸ್ಥೆ ವತಿಯಿಂದ ಆರಂಭವಾದ ಕೊಂಕಣಿ ಪತ್ರಿಕೆ (ಅಮರ್ ಕೊಂಕಣಿ)ಯ ಸಂಪಾದಕ ಡಾ. ಮೆಲ್ವಿನ್ ಪಿಂಟೋ ಮತ್ತು ತುಳು ಸಾಹಿತ್ಯ ಪ್ರಶಸ್ತಿಯನ್ನು ಡಾ.ಸುನಿತಾ ಎಂ.ಶೆಟ್ಟಿ ಅವರ ಪರವಾಗಿ ಸಂಬಂಧಿ ವತ್ಸಲಾ ಹಾಗೂ ವಿಶೇಷ ಪ್ರಶಸ್ತಿಯನ್ನು ಸಮರ್ಥನಂ ಟ್ರಸ್ಟ್ ಪರವಾಗಿ ಮಹಾಂತೇಶ್ ಜಿ. ಕಿವುಡ ಸಣ್ಣವರ್ ಸ್ವೀಕರಿಸಿದರು.
2021-22ನೆ ಸಾಲಿನ ಕೊಂಕಣಿ ಸಾಹಿತ್ಯ ಪ್ರಶಸ್ತಿಯನ್ನು ಮೆಲ್ವಿನ್ ರೋಡ್ರಿಗಸ್, ತುಳು ಸಾಹಿತ್ಯ ಪ್ರಶಸ್ತಿಯನ್ನು ಬಿ.ಕೆ.ಗಂಗಾಧರ್ ಕಿರೋಡಿಯನ್, ಸಂದೇಶ ಮಾಧ್ಯಮ ಪ್ರಶಸ್ತಿಯನ್ನು ಡಾ.ಟಿ.ಸಿ. ಪೂರ್ಣಿಮಾ, ಕೊಂಕಣಿ ಸಂಗೀತ ಪ್ರಶಸ್ತಿಯನ್ನು ಆಲ್ವಿನ್ ನೊರೊನ್ಹಾ, ಕಲಾ ಪ್ರಶಸ್ತಿಯನ್ನು ಕಾಸರಗೋಡು ಚಿನ್ನಾ, ಶಿಕ್ಷಣ ಪ್ರಶಸ್ತಿಯನ್ನು ಡಾ.ಪಿ.ಕೆ.ರಾಜಶೇಖರ್, ವಿಶೇಷ ಪ್ರಶಸ್ತಿಯನ್ನು ಸ.ರಘುನಾಥ್ ಅವರಿಗೆ ಪ್ರದಾನ ಮಾಡಲಾಯಿತು.
2020-21ನೆ ಸಾಲಿನ ಕನ್ನಡ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದ ಬರಗೂರು ರಾಮಚಂದ್ರಪ್ಪ, 2021-22ನೆ ಸಾಲಿನ ಕನ್ನಡ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದ ರಹ್ಮತ್ ತರೀಕೆರೆ ಕಾರಣಾಂತರದಿಂದ ಹಾಜರಿರಲಿಲ್ಲ.
ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂದೇಶ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಬಳ್ಳಾರಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ವಂ.ಹೆನ್ರಿ ಡಿಸೋಜ ಸಮಾಜದಲ್ಲಿ ಒಂದೆಡೆ ಸಾಧನೆ ಮಾಡಿದ ಸಾಧಕರು, ಇನ್ನೊಂದೆಡೆ ಸಾಧನೆ ಮಾಡದಿದ್ದರೂ ಸಾಧಕರನ್ನು ಕಣ್ತುಂಬಿಕೊಳ್ಳುವ ಪ್ರೇಕ್ಷಕರು, ಸಾಧನೆಗಳನ್ನು ಕಂಡು ಅಚ್ಚರಿ ಪಡುವವರು, ತನಗಾಗಿ ಮತ್ತು ತನ್ನವರಿಗಾಗಿ ಸೇವೆ ಮಾಡುವವರು, ಪರರಿಗಾಗಿ ಬದುಕಿದವನ್ನು ಕಾಣಬಹುದಾಗಿದೆ. ಜೊತೆಗೆ ಈ ಜಗತ್ತಿನಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು, ಜೈನರು ಹೀಗೆ ಅನೇಕ ಧರ್ಮೀಯರಿದ್ದಾರೆ. ನಾನಾ ಧರ್ಮಗ್ರಂಥಗಳೂ ಇವೆ. ಆದರೆ ಮಾನವರು ಎಲ್ಲಿದ್ದಾರೆ ಮತ್ತು ಮನುಷ್ಯನ ಹೃದಯದಲ್ಲಿರಬೇಕಾದ ಪ್ರೀತಿ ಎಲ್ಲಿದೆ ಎಂಬ ಪ್ರಶ್ನೆಯು ಎಂದಿಗೂ ಪ್ರಶ್ನೆಯಾಗಿ ಉಳಿಯಬಾರದು.ಹಿಂಸೆ, ದುರಾಚಾರಗಳನ್ನು ಪ್ರೀತಿಯಿಂದ ಹೋಗಲಾಡಿಸಬೇಕಿದೆ. ಪ್ರತಿಯೊಬ್ಬರೂ ಪರಸ್ಪರ ಅರ್ಥಮಾಡಿಕೊಂಡು ಸಹೋದರತೆಯಿಂದ ಬಾಳಬೇಕಿದೆ ಎಂದರು.
ಮಂಗಳೂರು ಧರ್ಮ ಪ್ರಾಂತದ ಧರ್ಮಾಧ್ಯಕ್ಷ ವಂ. ಪೀಟರ್ ಪಾವ್ಲ್ ಸಲ್ದಾನ ಮತ್ತು ಮಂಗಳೂರು ವಿವಿ ಕುಲಪತಿ ಡಾ.ಪಿ.ಯಸ್.ಯಡಪಡಿತ್ತಾಯ ಶುಭ ಹಾರೈಸಿದರು.
ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ.ಫ್ರಾನ್ಸಿಸ್ ಅಸ್ಸಿಸಿ ಅಲ್ಮೆಡಾ ಸ್ವಾಗತಿಸಿದರು. ಆಯ್ಕೆ ಸಮಿತಿಯ ಅಧ್ಯಕ್ಷ ವಲೇರಿಯನ್ ರೋಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಶನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಸಂದೇಶ ಪ್ರತಿಷ್ಠಾನದ ವಿಶ್ವಸ್ಥ ರೊಯ್ ಕ್ಯಾಸ್ತಲಿನೊ ವಂದಿಸಿದರು.