ಮಣಿಪಾಲ: ಮಣ್ಣಪಳ್ಳದಲ್ಲಿ ಬಾಗಲಕೋಟೆ ಮೂಲದ ಯುವಕನ ಅನುಮಾನಾಸ್ಪದ ಸಾವು
ಮಣಿಪಾಲ, ಫೆ.23: ಇಲ್ಲಿನ ಮಣ್ಣಪಳ್ಳದಲ್ಲಿ ಬಾಗಲಕೋಟೆ ಮೂಲದ ಯುವಕನೊಬ್ಬನ ಮೃತದೇಹವು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ.
ಮೃತರನ್ನು ಬಾಗಲಕೋಟೆ ಮೂಲದ, ಮಣಿಪಾಲ ಶಾಂತಿನಗರದ ನಿವಾಸಿ ಮುಹಮ್ಮದ್ ಇಸ್ಮಾಯೀಲ್(30) ಎಂದು ಗುರುತಿಸಲಾಗಿದೆ. ಕಾರ್ಮಿಕರಾಗಿರುವ ಇವರನ್ನು ಫೆ.21ರಂದು ಮಧ್ಯಾಹ್ನದ ಬಳಿಕ ನಾಪತ್ತೆಯಾಗಿದ್ದ ಇವರ ಮೃತದೇಹ ಮಣ್ಣಪಳ್ಳದಲ್ಲಿ ಪತ್ತೆಯಾಗಿದೆ.
ಈ ಸಾವಿನ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕೆ ಆಗಮಿಸಿ ಪರೀಶಿಲನೆ ನಡೆಸಿದ್ದಾರೆ. ಮೃತದೇಹವನ್ನು ಮಣಿಪಾಲ ಶವಗಾರಕ್ಕೆ ವರ್ಗಾಯಿಸಲಾಗಿದ್ದು, ಮರಣೋತ್ತರ ಪರೀಕ್ಷೆಯಿಂದ ಎಲ್ಲವೂ ಸ್ಪಷ್ಟವಾಗಲಿದೆ. ಮೃತದೇಹದಲ್ಲಿ ಯಾವುದೇ ಗಾಯಗಳು ಕಂಡುಬಂದಿಲ್ಲ ಎಂದು ಮಣಿಪಾಲ ಪೊಲೀಸರು ತಿಳಿಸಿದ್ದಾರೆ.
ಕೊಲೆ ಯತ್ನದಿಂದ ಮಹಿಳೆಯನ್ನು ರಕ್ಷಿಸಿದ್ದರು!
ಮಣಿಪಾಲ ಸಮೀಪದ ಮಂಚಿಕುಮೇರಿಯಲ್ಲಿ ಫೆ.18ರಂದು ಸಂಜೆ ರಮಾನಾಥ್ ರೈ ಎಂಬವರ ಪತ್ನಿ ಸುಮತಿ ಎಂಬವರನ್ನು ಕೊಲೆಗೆ ಯತ್ನಿಸಿ, ಟ್ರಾಲಿ ಬ್ಯಾಗ್‌ನಲ್ಲಿ ಹಾಕಿ ಸಾಗಿಸಲು ಯತ್ನಿಸುತ್ತಿದ್ದ ಆರೋಪಿಗಳಾದ ಸುಮತಿಯ ಅಕ್ಕನ ಮಗ ಮಿಥುನ್ ಹಾಗೂ ಆತನ ಸ್ನೇಹಿತ ನಾಗೇಶ್ ಎಂಬವರನ್ನು ಹಿಡಿಯುವಲ್ಲಿಯೂ ಇಸ್ಮಾಯೀಲ್ ಪ್ರಮುಖ ಪಾತ್ರವಹಿಸಿದ್ದರು ಎಂದು ತಿಳಿದು ಬಂದಿದೆ.
ಈ ಆರೋಪಿಗಳು ಮನೆಗೆ ನುಗ್ಗಿ ಬಾಗಿಲು ಹಾಕಿದ್ದ ಸಂದರ್ಭದಲ್ಲಿ ಮನೆಗೆ ರಮಾನಾಥ್ ರೈ ಬಾಗಿಲನ್ನು ಬಡಿದರೂ ಅವರ ಪತ್ನಿ ಬಾಗಿಲು ತೆಗೆದಿರಲಿಲ್ಲ. ಒಳಗೆ ಗಲಾಟೆ ಶಬ್ದ ಕೇಳಿ ರಮಾನಾಥ್ ಬೊಬ್ಬೆ ಹಾಕಿದಾಗ ಅಲ್ಲೇ ಸಮೀಪದ ಮೈದಾನದಲ್ಲಿ ಆಡುತ್ತಿದ್ದ ಇಸ್ಮಾಯೀಲ್ ಹಾಗೂ ಇತರರು ಓಡಿ ಹೋಗಿ ಆರೋಪಿಗಳನ್ನು ಹಿಡಿಯುವ ಕಾರ್ಯ ಮಾಡಿದ್ದರು ಎಂದು ಮಣಿಪಾಲ ಠಾಣೆಯಲ್ಲಿ ದಾಖಲಾಗಿದ್ದ ದೂರಿನಲ್ಲಿ ತಿಳಿಸಲಾಗಿತ್ತು.