ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ತಮಿಳುನಾಡಿನಲ್ಲಿ ಬಿಜೆಪಿ ಈಗ 'ಮೂರನೇ ದೊಡ್ಡ ಪಕ್ಷ' ವಾಗಿದೆ ಎಂದ ಅಣ್ಣಾಮಲೈ

ಚೆನ್ನೈ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ನಂತರ ಬಿಜೆಪಿ "ಮೂರನೇ ಅತಿದೊಡ್ಡ ಪಕ್ಷ" ವಾಗಿ ಹೊರಹೊಮ್ಮಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಹೇಳಿಕೊಂಡಿದ್ದಾರೆ.
ಡಿಎಂಕೆಯ ಮಿತ್ರ ಪಕ್ಷವಾದ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಹೊಂದಿರುವಾಗ ನೀವು ಹೇಗೆ ಆ ರೀತಿಯ ವಾದ ಮಂಡಿಸುತ್ತಿದ್ದೀರಿ ಎಂದು ಕೇಳಿದಾಗ, ನಮ್ಮ ಪಕ್ಷವು ಗೆದ್ದ ಸ್ಥಳಗಳು ಮತ್ತು ಮತಗಳ ಹಂಚಿಕೆಯನ್ನು ಆಧರಿಸಿ ಹೇಳುತ್ತಿದ್ದೇನೆ. ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿ ಹಾಗೂ ಕನಿಷ್ಟ ಠೇವಣಿಯಾದರೂ ವಾಪಸ್ ಪಡೆಯಲಿ ಎಂದರು.
ಎಐಎಡಿಎಂಕೆ ಮೈತ್ರಿಕೂಟದಿಂದ ಹೊರಬಂದ ನಂತರ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿರುವ ಬಿಜೆಪಿಗೆ 10 ಜಿಲ್ಲೆಗಳಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಪಕ್ಷವು 230 ಪಟ್ಟಣ ಪಂಚಾಯಿತಿ ವಾರ್ಡ್‌ಗಳು, 56 ಪುರಸಭೆ ವಾರ್ಡ್‌ಗಳು ಹಾಗೂ 22 ಕಾರ್ಪೊರೇಷನ್ ವಾರ್ಡ್‌ಗಳನ್ನು ಗೆದ್ದುಕೊಂಡಿದೆ. ಇದರಲ್ಲಿ ಚೆನ್ನೈನಲ್ಲಿನ ಒಂದು ಸ್ಥಾನವೂ ಸೇರಿದೆ. ಕನ್ಯಾಕುಮಾರಿ ಜಿಲ್ಲೆಯೊಂದರಲ್ಲೇ ಬಿಜೆಪಿ ಪಕ್ಷವು 200 ವಾರ್ಡ್‌ಗಳಲ್ಲಿ ಗೆದ್ದಿದೆ. ಎಲ್ಲ ವಿಭಾಗದಲ್ಲಿ ಒಟ್ಟು 308 ವಾರ್ಡ್‌ಗಳನ್ನು ಪಡೆದುಕೊಂಡಿದೆ.
ಒಟ್ಟಾರೆಯಾಗಿ 2011 ರಲ್ಲಿ ಕಾರ್ಪೊರೇಶನ್‌ಗಳು, ಪುರಸಭೆಗಳು ಮತ್ತು ಪಟ್ಟಣ ಪಂಚಾಯತಿಗಳಲ್ಲಿ 1.76% ರಷ್ಟಿದ್ದ ಪಕ್ಷದ ಸ್ಥಾನ ಹಂಚಿಕೆಯು 2022 ರಲ್ಲಿ 2.4 ಶೇ. ಕ್ಕೆ ಏರಿದೆ. 2011 ರಲ್ಲಿ ಪಕ್ಷವು ಈ ವಿಭಾಗಗಳಾದ್ಯಂತ 12,816 ಸ್ಥಾನಗಳಲ್ಲಿ 226 ಅನ್ನು ಗೆದ್ದಿತ್ತು.







