ಮಲಬಾರ್ ವಿಶ್ವರಂಗ ಪುರಸ್ಕಾರಕ್ಕೆ ಐವರು ಹಿರಿಯ ರಂಗಕರ್ಮಿಗಳ ಆಯ್ಕೆ
ಉಡುಪಿ, ಫೆ.23: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಕಾರದಲ್ಲಿ ಪ್ರಧಾನ ಮಾಡುತ್ತಿರುವ ’ಮಲಬಾರ್ ವಿಶ್ವರಂಗ ಪುರಸ್ಕಾರ 2022ಕ್ಕೆ’ ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳು ಆಯ್ಕೆಯಾಗಿದ್ದಾರೆ.
ಕುಂದಾಪುರದ ಡಾ.ಪಾರ್ವತಿ ಜಿ. ಐತಾಳ (ನಾಟಕಕಾರರು ಹಾಗೂ ವಿಮರ್ಶಕರು), ಮುಂಬೈನ ಡಾ. ಭರತ್ ಕುಮಾರ್ ಪೊಲಿಪು (ನಟ ಹಾಗೂ ನಿರ್ದೇಶಕರು), ಉಡುಪಿಯ ಬಿ. ಪ್ರಭಾಕರ ಭಂಡಾರಿ (ಸಂಘಟಕರು ತುಳು ರಂಗಭೂಮಿ), ಮಂಗಳೂರಿನ ಅರೆಹೊಳೆ ಸದಾಶಿವ ರಾವ್ (ಸಂಘಟಕರು ಕನ್ನಡ ರಂಗಭೂಮಿ), ಹಾವೇರಿಯ ಶಂಕರ ಶಿವಪ್ಪ ತುಮ್ಮಣ್ಣನವರ (ನಟ) ಇವರು ಆಯ್ಕೆಯಾದ ರಂಗಕರ್ಮಿಗಳು.
ಆಯ್ಕೆಯಾದ ಐವರು ರಂಗಕರ್ಮಿಗಳಿಗೆ ಇದೇ ಮಾರ್ಚ್ 27ರಂದು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ನಡೆಯುವ ವಿಶ್ವರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ‘ಮಲಬಾರ್ ವಿಶ್ವರಂಗ ಪುರಸ್ಕಾರ’ ಪ್ರಧಾನ ಮಾಡಲಾಗುವುದು ಎಂದು ಸಮಿತಿಯ ಸಂಚಾಲಕ ರಾಜೇಶ್ ಭಟ್ ಪಣಿಯಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





