ಸಂಕಷ್ಟದಲ್ಲಿ ಸಚಿವರು ತಮ್ಮದೇ ಸಂಬಳ ಹೆಚ್ಚಿಸಿಕೊಂಡಿರುವುದು ಜನವಿರೋಧಿ ಕ್ರಮ: ಎಸ್‍ಯುಸಿಐ

ಬೆಂಗಳೂರು, ಫೆ. 23: ‘ಕೋವಿಡ್‍ನಿಂದ ಜನ ಸಮುದಾಯ ಆರ್ಥಿಕ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ತಮ್ಮ ಅಧಿಕಾರ ಬಳಸಿ ಈ ಸಮಸ್ಯೆಗಳನ್ನು ಪರಿಹರಿಸುವ ಬದಲು, ಜನರ ತೆರಿಗೆ ಹಣದಿಂದ ವೇತನ ಪಡೆಯುವ ಜನಪ್ರತಿನಿಧಿಗಳು ತಮ್ಮದೆ ವೇತನ ಹೆಚ್ಚಿಸಿಕೊಂಡಿರುವುದು ಜನ ವಿರೋಧಿ ಕ್ರಮವಾಗಿದ್ದು, ಸರಕಾರ ಈ ತೀರ್ಮಾನವನ್ನು ಕೈಬಿಡಬೇಕು' ಎಂದು ಎಸ್‍ಯುಸಿಐ ಒತ್ತಾಯಿಸಿದೆ.
‘ಶಾಸನ ಸಭೆಯಲ್ಲಿ ಹೆಚ್ಚಿನ ಚರ್ಚೆ, ವಾದಗಳಿಲ್ಲದೆ ಶಾಸಕರ ಮತ್ತು ಸಚಿವರ ವೇತನ, ಭತ್ತೆ ಮತ್ತು ಸೌಲಭ್ಯಗಳನ್ನು ಹೆಚ್ಚಿಸುವ ಮಸೂದೆಯನ್ನು ಅಂಗೀಕರಿಸಲಾಗಿದೆ. ಹಣದುಬ್ಬರ, ಬೆಲೆ ಏರಿಕೆಗೆ ತಕ್ಕಂತೆ ವೆಚ್ಚವನ್ನು ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ಸಮರ್ಥನೆ ನೀಡುತ್ತಿದ್ದಾರೆ. ಪ್ರತಿನಿತ್ಯ ಜನಜೀವನಕ್ಕೆ ಸಂಬಂಧವೇ ಇಲ್ಲದ ಕ್ಷುಲ್ಲಕ ವಿಷಯಗಳಿಗೆ ಕಚ್ಚಾಡುವ ವಿಪಕ್ಷಗಳು ಈ ತೀರ್ಮಾನಕ್ಕೆ ಸಮ್ಮತಿ ಸೂಚಿಸಿರುವುದು ಅಕ್ಷಮ್ಯ' ಎಂದು ಎಸ್‍ಯುಸಿಐನ ಕಾರ್ಯದರ್ಶಿ ಕೆ.ಉಮಾ ಆಕ್ಷೇಪಿಸಿದ್ದಾರೆ.
‘ಕೋವಿಡ್ ಕಾರಣದಿಂದ ಆರ್ಥಿಕ ಬಿಕ್ಕಟ್ಟಿದೆ, ಸರಕಾರದ ಆದಾಯ ಕುಂಠಿತವಾಗಿದೆ ಎಂದು ಸಚಿವರೇ ಹೇಳುತ್ತಾರೆ. ಇನ್ನೊಂದೆಡೆ, ಬೆಲೆ ಏರಿಕೆ, ಹಣದುಬ್ಬರಕ್ಕೆ ತಕ್ಕಂತೆ ಕನಿಷ್ಠ ಕೂಲಿ ನಿಗದಿ ಮಾಡಿ ಎಂಬ ಬಡ ಕಾರ್ಮಿಕರ ಆಗ್ರಹಕ್ಕೆ ಸರಕಾರ ಕುರುಡಾಗಿದೆ. ಕನಿಷ್ಠ ವೇತನ ಇಲ್ಲದೆ ದುಡಿಯುವ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು ಗೌರವಧನ ಏರಿಕೆಗೆ ಆಗ್ರಹಿಸಿದರೆ, ಹಣಕಾಸಿನ ಕೊರತೆ ಕಾರಣ ನೀಡಲಾಗುತ್ತದೆ. ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಕಷ್ಟಕಾಲದಲ್ಲಿ ತಮ್ಮ ವೆಚ್ಚ ಕಡಿತ ಮಾಡಿಕೊಂಡು ಸರಳವಾಗಿ ಬದುಕಲು ಜನಪ್ರತಿನಿಧಿಗಳು ಕಲಿಯಬೇಕು' ಎಂದು ಅವರು ಸಲಹೆ ನೀಡಿದ್ದಾರೆ.







