ಉಡುಪಿ: ಉದ್ಯೋಗಿಗಳಿಗೆ ಇಪಿಎಫ್ ನಾಮಿನಿ ಸಲ್ಲಿಸಲು ಸೂಚನೆ
ಉಡುಪಿ, ಫೆ.23: ಕೇಂದ್ರ ಸರಕಾರ ಆರಂಭಿಸಿದ ‘ಆಝಾದ್ ಕಾ ಮಹೋತ್ಸವ್’ಅಂಗವಾಗಿ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ನ ಎಲ್ಲಾ ಬಗೆಯ ಉದ್ಯೋಗಿಗಳು ನಾಮ ನಿರ್ದೇಶನ (ಇ-ನಾಮಿನೇಷನ್) ಸಲ್ಲಿಸುವಂತೆ ಪಿಎಫ್ ಪ್ರಾದೇಶಿಕ ಆಯುಕ್ತ ಡಾ.ಅಜಯ್‌ಸಿಂಗ್ ಚೌಧರಿ ಮನವಿ ಮಾಡಿದ್ದಾರೆ.
ಇಪಿಎಫ್ ಯೋಜನೆಯಡಿ ಪಿಎಫ್ ಶೇಖರಣೆ, ಪಿಂಚಣಿ ಸೌಲಭ್ಯಗಳ ಪಾಲನ್ನು ಪಡೆಯಲು ನಾಮ ನಿರ್ದೇಶನ ಬಹಳ ಮುಖ್ಯವಾಗಿದ್ದು, ಸದಸ್ಯನ ಮರಣದ ನಂತರ ನಾಮ ನಿರ್ದೇಶಿತರಿಗೆ (ನಾಮಿನಿ) ಅನುಕೂಲವಾಗಲಿದೆ. ಸದಸ್ಯರು ಇಪಿಎಫ್ ಯೋಜನೆಗಳಿಗಾಗಿ ಅವರ ಕುಟುಂಬಕ್ಕೆ ಸೇರಿದ ಒಬ್ಬ ಅಥವಾ ಹೆಚ್ಚಿನ ವ್ಯಕ್ತಿಗಳ ಪರವಾಗಿ ನಾಮ ನಿರ್ದೇಶನ ಮಾಡಬಹುದಾಗಿದೆ.
ಇಪಿಎಫ್ ಸದಸ್ಯರು ತಮ್ಮ ಕುಟುಂಬಕ್ಕೆ ಸೇರದ ವ್ಯಕ್ತಿಯ ಪರವಾಗಿ ಮಾಡಿದ ಯಾವುದೇ ನಾಮ ನಿರ್ದೇಶನವೂ ಅಮಾನ್ಯವಾಗುವುದು. ಸದಸ್ಯನು ತನ್ನ ವಿವಾಹದ ನಂತರ ಹೊಸದಾಗಿ ನಾಮನಿರ್ದೇಶನ ಮಾಡಬೇಕಾಗುತ್ತದೆ. ಮದುವೆಗೆ ಮುಂಚಿತವಾಗಿ ಮಾಡಿದ ಯಾವುದೇ ನಾಮ ನಿರ್ದೇಶನವನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ನಾಮ ನಿರ್ದೇಶನ ಮಾಡುವ ಸಮಯ ದಲ್ಲಿ, ಸದಸ್ಯರಿಗೆ ಕುಟುಂಬವಿಲ್ಲದಿದ್ದರೆ ನಾಮ ನಿರ್ದೇಶನವು ಯಾವುದೇ ವ್ಯಕ್ತಿಗಳ ಪರವಾಗಿರಬಹುದು. ಆದರೆ ಸದಸ್ಯರು ತರುವಾಯ ಒಂದು ಕುಟುಂಬಸ್ಡರಾದರೆ ಹಿಂದೆ ಮಾಡಿದ್ದ ನಾಮ ನಿರ್ದೇಶನವನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಅವರು ಹೊಸ ನಾಮ ನಿರ್ದೇಶನವನ್ನು ಮಾಡಬೇಕಾಗುತ್ತದೆ.
ಸದಸ್ಯರು https://unifiedportal-mem.epfindia.gov.in/memberinterface/ ಈ ಪೋರ್ಟಲ್‌ನಲ್ಲಿ ಇ-ನಾಮಿನೇಷನ್ ಮೂಲಕ ಎಷ್ಟು ಬಾರಿಯಾದರೂ ತಮ್ಮ ನಾಮಿನಿಯನ್ನು ನಾಮ ನಿರ್ದೇಶನ ಮಾಡಬಹುದು ಮತ್ತು ಇತ್ತೀಚೆಗೆ ಸಲ್ಲಿಸಲಾದ ನಾಮ ನಿರ್ದೇಶನ ಮಾತ್ರ ಮಾನ್ಯವಾಗಿರುತ್ತದೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







