ನವಾಬ್ ಮಲಿಕ್ ಬಂಧನದ ಕುರಿತು ಮಮತಾ ಬ್ಯಾನರ್ಜಿ-ಪವಾರ್ ಮಾತುಕತೆ: ಪ.ಬಂ ಸಿಎಂ ಸಲಹೆ ಸ್ವೀಕರಿಸಿದ ಮಹಾರಾಷ್ಟ್ರ ಸರಕಾರ

ಮುಂಬೈ: ಸಚಿವ ನವಾಬ್ ಮಲಿಕ್ ಬಂಧನದ ಕುರಿತಂತೆ ಹಾಗೂ ರಾಜಕೀಯ ಬೆಳವಣಿಗೆ ಕುರಿತು ಸಲಹೆ ಪಡೆಯಲು ಮಹಾರಾಷ್ಟ್ರ ಹಿರಿಯ ರಾಜಕಾರಣಿ, ಎನ್‌ಸಿಪಿ ಮುಖಂಡ ಶರದ್ ಪವಾರ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಫೋನ್ ಮೂಲಕ ಮಾತುಕತೆ ನಡೆಸಿದ್ದಾರೆಂದು ಮೂಲಗಳನ್ನು ಉಲ್ಲೇಖಿಸಿ NDTV ವರದಿ ಮಾಡಿದೆ.
ಕನಿಷ್ಟ 10 ನಿಮಿಷಕ್ಕೂ ಅಧಿಕ ಹೊತ್ತು ಹಿರಿಯ ರಾಜಕಾರಣಿಗಳಿಬ್ಬರೂ ಮಾತುಕತೆ ನಡೆಸಿದ್ದಾರೆ, ಈ ವೇಳೆ ಸಿಎಂ ಬ್ಯಾನರ್ಜಿ ತಮ್ಮ ಬೆಂಬಲ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸಿದ್ದಾರೆ.
ನಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ಸಚಿವರನ್ನು ಅಮಾನತುಗೊಳಿಸಿದ್ದೀರಾ ಎಂದು ಪವಾರ್ ಮಮತಾ ಬ್ಯಾನರ್ಜಿಯನ್ನು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಗೂ ಒಟ್ಟಾರೆ, ಸನ್ನಿವೇಶವನ್ನು ಹೇಗೆ ನಿಭಾಯಿದ್ದಾರೆ ಎನ್ನುವುದನ್ನೂ ಪವಾರ್ ಬ್ಯಾನರ್ಜಿ ಬಳಿ ಕೇಳಿರುವುದಾಗಿ ಮೂಲಗಳು ತಿಳಿಸಿವೆ.
ಕಳೆದ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆದ ರಾಜ್ಯ ಚುನಾವಣೆಗಳಿಗೆ ಮುನ್ನ ಮಮತಾ ಬ್ಯಾನರ್ಜಿ ಕೂಡ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದರು, ಸಚಿವರು ಸೇರಿದಂತೆ ಹಲವಾರು ತೃಣ ಮೂಲ ಪಕ್ಷದ ನಾಯಕರು ಕೇಂದ್ರ ತನಿಖಾ ಸಂಸ್ಥೆಗಳಿಂದ ಗುರಿಯಾಗಿದ್ದರು.
ನವಾಬ್ ಮಲಿಕ್ ಅವರನ್ನು ಸಂಪುಟದಿಂದ ಕೈಬಿಡುವ ಮೂಲಕ ಬಿಜೆಪಿ ಖೆಡ್ಡಾಕ್ಕೆ ಬೀಳಬೇಡಿ. ಸಂಪೂರ್ಣ ತನಿಖಾ ಸಂಸೆಗಳನ್ನು ಬಳಸಿ ಬಿಜೆಪಿ ರಾಜಕೀಯದಾಟ ಆಡುತ್ತಿದೆ ಎಂದು ಬ್ಯಾನರ್ಜಿ ಶರದ್ ಪವಾರ್ ಅವರಿಗೆ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.
ಫೋನ್ ಮಾತುಕತೆಯ ಬೆನ್ನಲ್ಲೇ, ಮಹಾರಾಷ್ಟ್ರ ಸರ್ಕಾರವು ನವಾಬ್ ಮಲಿಕ್ ರಾಜಿನಾಮೆಯನ್ನು ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.







