ಉಡುಪಿ: ಆರ್‌ಎಎಫ್ ಸಹಿತ ಪೊಲೀಸರಿಂದ ಪಥಸಂಚಲನ
ಉಡುಪಿ, ಫೆ.23: ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಸೇರಿದಂತೆ ಪೊಲೀಸ್ ತಂಡಗಳಿಂದ ಬುಧವಾರ ಉಡುಪಿ ನಗರದಲ್ಲಿ ಪಥ ಸಂಚಲನ ನಡೆಯಿತು.ನಗರದ ಜೋಡುಕಟ್ಟೆಯಿಂದ ಆರಂಭಗೊಂಡ ಪಥಸಂಚಲನವು ಕೋರ್ಟ್ ರಸ್ತೆ, ಹಳೆಯ ಡಯಾನ ಸರ್ಕಲ್, ಕೆಎಂ ಮಾರ್ಗವಾಗಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು. ಇದರಲ್ಲಿ ರ್ಯಾಪಿಡ್ ಆ್ಯಕ್ಷನ್ ಫೋರ್ಸ್‌ನ ಅಸಿಸ್ಟೆಂಟ್ ಕಮಾಂಡರ್ ಸಹಿತ 90 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ, ಜಿಲ್ಲೆಯ 200 ಸಿವಿಲ್ ಹಾಗೂ ಆರ್ಮ್ಡ್ ಸಿಬ್ಬಂದಿ, ಕೆಎಸ್‌ಆರ್‌ಪಿ, ಡಿಎಆರ್ ತುಕಡಿಗಳು ಪಾಲ್ಗೊಂಡಿದ್ದವು.
ಈ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಪೊಲೀಸ್ ಇಲಾಖೆ ಸಾರ್ವಜನಿಕರ ರಕ್ಷಣೆಗೆ ಸದಾ ಇದೆ ಎಂಬ ಸಂದೇಶ ಸಾರುವ ಉದ್ದೇಶದಿಂದ ಈ ಪಥಸಂಚಲನ ನಡೆಸಲಾಗಿದೆ. ಕಾನೂನು ಕೈಗೆತ್ತಿ ಕೊಳ್ಳುವವರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಕಡೆಗಳಲ್ಲಿಯೂ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳನ್ನು ಕೂಡ ಗಮನಿಸುತ್ತಿದ್ದೇವೆ. ಯಾರೇ ತಪಿತಸ್ಥೆ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದು ಕೊಳ್ಳುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ, ಡಿವೈಎಸ್ಪಿ ಶಿವಾನಂದ ನಾಯ್ಕಿ, ಡಿಎಆರ್ ಡಿವೈಎಸ್ಪಿ ರಾಘವೇಂದ್ರ, ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್, ಮಲ್ಪೆ ವೃತ್ತ ನಿರೀಕ್ಷಕ ಶರಣಗೌಡ ಪಾಟೀಲ್, ನಗರ ಎಸ್ಸೈ ವಾಸಪ್ಪ ನಾಯ್ಕೆ, ಸಂಚಾರ ಪೊಲೀಸ್ ಠಾಣಾ ಎಸ್ಸೈ ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು.