ಹಿಜಾಬ್ ಪ್ರಕರಣ: ನ್ಯಾಯಾಲಯದ ಮಧ್ಯಂತರ ಆದೇಶದ ದುರ್ವಾಖ್ಯಾನ ಖಂಡಿಸಿ ಎಸ್ಸೆಸ್ಸೆಫ್ ಪ್ರತಿಭಟನೆ

ಮಂಗಳೂರು, ಫೆ.23: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮಧ್ಯಂತರ ಆದೇಶದ ದುರ್ವಾಖ್ಯಾನ ಖಂಡಿಸಿ ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಸಮಿತಿಯು ಬುಧವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿತು. ಬಳಿಕ ಎಸ್ಸೆಸ್ಸೆಫ್ ನಿಯೋಗವು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿತು.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಮಾತನಾಡಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಪಾಲಿಸುವ ಬದಲು ದುರ್ವಾಖ್ಯಾನ ಮಾಡಲಾಗುತ್ತಿದೆ. ಕೆಲವು ಶಿಕ್ಷಣ ಸಂಸ್ಥೆಗಳು ಕೂಡ ಗೊಂದಲ ಸೃಷ್ಟಿಸುತ್ತಿದೆ. ಇದರಿಂದ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರಿದೆ ಎಂದರು.
ಸಮಾಜ, ಸರಕಾರ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಬದಲು ಸಮವಸ್ತ್ರದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು. ಹಿಜಾಬ್ ವಿವಾದದಿಂದ ಸಾವಿರಾರು ಮುಸ್ಲಿಂ ವಿದ್ಯಾರ್ಥಿನಿರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಗೊಂದಲದ ವಾತಾವರಣದಿಂದ ವಿದ್ಯಾರ್ಥಿಗಳು ಆತಂಕಿತರಾಗಿದ್ದಾರೆ. ಈ ವಿವಾದದ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿರುವುದು ವಿಪರ್ಯಾಸ ಎಂದು ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಹೇಳಿದರು.
ಪ್ರತಿಭಟನೆಯ ನೇತೃತ್ವವನ್ನು ಎಸ್ಸೆಸ್ಸೆಫ್ ಮುಖಂಡರಾದ ಇಸ್ಮಾಯೀಲ್ ಮಾಸ್ಟರ್, ಮುಹಮ್ಮದ್ ಅಲಿ ತುರ್ಕಳಿಕೆ, ಸಿರಾಜುದ್ದೀನ್ ಸಖಾಫಿ ಕನ್ಯಾನ, ನವಾಝ್ ಸಖಾಫಿ ಅಡ್ಯಾರ್. ಎಂ. ಶರೀಫ್ ಬೆರ್ಕಳ, ಹೊಸ್ಮಾರ್ ಸಅದಿ, ಮುನೀರ್ ಸಖಾಫಿ ಉಳ್ಳಾಲ, ಹಮೀದ್ ತಲಪಾಡಿ, ಎಸ್ಸೆಸ್ಸೆಫ್ ಕ್ಯಾಂಪಸ್ ಕಾರ್ಯದರ್ಶಿ ಅಬ್ದುರ್ರಶೀದ್ ಮಡಂತ್ಯಾರ್ ಮತ್ತಿತರರು ವಹಿಸಿದ್ದರು.
