ಕೋಟ್ಯಂತರ ರೂ.ಆಸ್ತಿ ಘೋಷಿಸುವ ಮಂತ್ರಿ,ಶಾಸಕರುಗಳಿಗೆ ವೇತನ ಹೆಚ್ಚಳ ಯಾಕೆ: ಇಂಟಕ್ ಪ್ರಶ್ನೆ
ಮಂಗಳೂರು, ಫೆ.23: ಚುನಾವಣಾ ಸಂದರ್ಭ ಕೋಟ್ಯಂತರ ರೂ.ಗಳನ್ನು ಆದಾಯವನ್ನಾಗಿ ತೋರಿಸುವ ಶಾಸಕರು, ಮಂತ್ರಿಗಳಿಗೆ ವೇತನ ಏರಿಸುವ ಅಗತ್ಯವೇನಿತ್ತು ಎಂದು ಇಂಟಕ್ ದ.ಕ. ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜನಸಾಮಾನ್ಯರು ಇಂದಿಗೂ ಕನಿಷ್ಠ ಕೂಲಿಯಲ್ಲಿ ಜೀವನವನ್ನು ನಡೆಸುತ್ತಿದ್ದು, ಅವರಿಗೂ ಕೂಡ ವೇತನ ಹೆಚ್ಚಿಸಿ ಎಂದು ಒತ್ತಾಯಿಸಿದ್ದಾರೆ.
ವೇತನ ಭತ್ತೆಯನ್ನು ಏರಿಸುವಾಗ ಯಾವೊಬ್ಬ ಶಾಸಕರು ವಿರೋಧ ಮಾಡುವ ಮನಸ್ಸು ಮಾಡಿಲ್ಲ. ಯಾವುದೇ ರಾಜಕೀಯವನ್ನು ತೋರಿಸುತ್ತಿಲ್ಲ. ಸಮಾಜಸೇವೆಗಾಗಿ ಇರುವ ರಾಜಕೀಯ ಇದೀಗ ವೃತ್ತಿಪರ ಉದ್ಯೋಗವನ್ನಾಗಿ ಮಾಡುವತ್ತ ರಾಜ್ಯ ಸರಕಾರ ಮುಂದಾಗಿದೆ ಎಂದು ಮನೋಹರ ಶೆಟ್ಟಿ ಆಪಾದಿಸಿದರು.
ಪೊಲೀಸ್ ಇಲಾಖೆ, ಶಿಕ್ಷಕರು, ಅತಿಥಿ ಉಪನ್ಯಾಸಕರು ಕಾರ್ಮಿಕ ವಲಯ ಮತ್ತಿತರ ದುಡಿಯುವ ವರ್ಗದವರನ್ನು ಕಡೆಗಣಿಸುತ್ತಿರುವ ಸರಕಾರ ಅವರಿಗೆ ವೇತನ ಆಯೋಗ ನೀಡುವ ವೇತನವನ್ನು ಕೊಡಲು ಸರಕಾರದಲ್ಲಿ ದುಡ್ಡಿಲ್ಲ ಎಂದು ತಳ್ಳಿ ಹಾಕಲಾಗುತ್ತಿದೆ. ಮೊದಲು ಕೊರೋನದಿಂದ ಉದ್ಯೋಗ ಕಳೆದುಕೊಂಡವರಿಗೆ, ಉದ್ಯಮದಲ್ಲಿ ನಷ್ಟ ಹೊಂದಿರುವವರಿಗೆ ಬಡಜನತೆಗೆ ಮೊದಲು ನೆರವಾಗಬೇಕು. ರಾಜ್ಯಪಾಲರು ತಕ್ಷಣ ಮದ್ಯ ಪ್ರವೇಶಿಸಿ ಈ ವೇತನ ಹೆಚ್ಚಳವನ್ನು ತಡೆ ಹಿಡಿಯಲು ಸರಕಾರಕ್ಕೆ ಸೂಚಿಸಬೇಕು. ಸಮಾನ ಮನಸ್ಕ ಕಾರ್ಮಿಕ ಸಂಘಟನೆಗಳು ನ್ಯಾಯಾಲಯದಲ್ಲಿ ಪ್ರಶ್ನಿಸುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಮನೋಹರ ಶೆಟ್ಟಿ ಹೇಳಿದ್ದಾರೆ.
ಇಂಟಕ್ ರಾಜ್ಯ ಮುಖಂಡ ಪಿ.ಕೆ. ಸುರೇಶ್ ಮಾತನಾಡಿ ಸರಕಾರ ನಡೆಸುವವರಿಗೆ ಒಂದು ನ್ಯಾಯ, ಕಾರ್ಮಿಕ ರಿಗೆ ಇನ್ನೊಂದು ನ್ಯಾಯವೆ? ಯಾಕೆ ಈ ತಾರತಮ್ಯ? ತಕ್ಷಣ ಕಾರ್ಮಿಕ ಹಾಗೂ ಕಡಿಮೆ ವೇತನ ದುಡಿಯುವ ವರ್ಗದವರಿಗೂ ಸರಕಾರ ದುಪ್ಪಟ್ಟು ವೇತನವನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.







