ಮಂಗಳೂರು: ಶಿವಮೊಗ್ಗ ದುಷ್ಕೃತ್ಯಕ್ಕೆ ಜನಪ್ರತಿನಿಧಿಗಳ ಪ್ರಚೋದನೆ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ

ಮಂಗಳೂರು,ಫೆ.23: ಶಿವಮೊಗ್ಗದಲ್ಲಿ ಗಲಭೆ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಸಚಿವ ಈಶ್ವರಪ್ಪರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಮಂಗಳೂರು ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ನಗರದ ಕ್ಲಾಕ್ ಟವರ್ ಮುಂದೆ ಬುಧವಾರ ಪ್ರತಿಭಟನೆ ನಡೆಯಿತು.
ಎಸ್‌ಡಿಪಿಐ ದ.ಕ.ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಸದಸ್ಯ ಅಶ್ರಫ್ ಕೆ.ಸಿ.ರೋಡ್ ಮಾತನಾಡಿ ಬಿಜೆಪಿ ಭಾವನೆಗಳನ್ನು ಕೆರಳಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾದರೆ ಅದು ಚುನಾವಣೆಯ ಮುನ್ಸೂಚನೆಯಾಗಿದೆ ಎಂದು ತಿಳಿದುಕೊಳ್ಳಬೇಕಿದೆ. ಚುನಾವಣೆಯನ್ನು ಎದುರಿಸಲು ಬಿಜೆಪಿಗೆ ಭಾವನೆಗಳೇ ಅಸ್ತ್ರವಾಗಿದೆ. ಅಭಿವೃದ್ಧಿಯಲ್ಲಿ ಹಿನ್ನಡೆಯಲ್ಲಿರುವ ಬಿಜೆಪಿಯು ಸೋಲಿನ ಭೀತಿಯಿಂದ ಪಾರಾಗಲು ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಹಾಗಾಗಿ ಬಿಜೆಪಿಯ ಈ ರಾಜಕೀಯ ಹಿಂಸೆಯ ಬಗ್ಗೆ ಜನರು ಎಚ್ಚೆತ್ತಿಕೊಳ್ಳಬೇಕಿದೆ ಎಂದರು.
ಸೆ.144ರ ನಡುವೆಯೂ ಸಚಿವ ಈಶ್ವರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ಪಾರ್ಥಿವ ಶರೀರದ ಯಾತ್ರೆಗೆ ನೇತೃತ್ವ ನೀಡಿದ್ದಾರೆ. ಆ ಬಳಿಕ ನಡೆದ ಗಲಭೆಗೆ ಅವರ ಪ್ರಚೋದನಕಾರಿ ಹೇಳಿಕೆಗಳೇ ಕಾರಣವಾಗಿದೆ. ಹಾಗಾಗಿ ಈಶ್ವರಪ್ಪರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಅಲ್ಲದೆ ಈ ಇಬ್ಬರು ಜನಪ್ರತಿನಿಧಿಗಳ ವಿರುದ್ದ ಕಠಿಣ ಕ್ರಮ ಜರಗಿಸಬೇಕು ಎಂದು ಅಶ್ರಫ್ ಕೆ.ಸಿ.ರೋಡ್ ಆಗ್ರಹಿಸಿದರು.
ಎಸ್‌ಡಿಪಿಐ ಮಂಗಳೂರು ಉತ್ತರ ಕ್ಷೇತ್ರದ ಅಧ್ಯಕ್ಷ ಯಾಸೀನ್ ಅರ್ಕುಳ, ಮಂಗಳೂರು ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷ ಜಲೀಲ್ ಕೃಷ್ಣಾಪುರ, ದ.ಕ.ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಸದಸ್ಯೆ ಮಿಸ್ರಿಯಾ ಕಣ್ಣೂರು, ಅಕ್ಬರ್ ಕುದ್ರೋಳಿ ಮತ್ತಿತರರು ಪಾಲ್ಗೊಂಡಿದ್ದರು.









