''ಸಾಂಸ್ಕೃತಿಕ- ಶೈಕ್ಷಣಿಕ ಹಕ್ಕನ್ನು ಕನ್ನಡದ ಮನಸ್ಸುಗಳಿಗೆ ತಿಳಿಸುವ ಜವಾಬ್ದಾರಿ ಪರಿಷತ್ ಮೇಲಿದೆ''
ನಾಗಮೋಹನ್ ದಾಸ್

ಬೆಂಗಳೂರು, ಫೆ.23: ಅತೀ ದೊಡ್ಡ ಸಂವಿಧಾನವನ್ನು ನಮ್ಮ ದೇಶ ಜಾರಿಗೆ ತಂದಿದೆ. ಸಂವಿಧಾನವನ್ನು ಓದಿ, ಅರ್ಥೈಸಿಕೊಂಡು ಅದರ ಆಶಯಗಳನ್ನು ಮೈಗೂಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಂವಿಧಾನದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕನ್ನು ಕನ್ನಡದ ಮನಸ್ಸುಗಳಿಗೆ ತಿಳಿಸುವ ಜವಾಬ್ದಾರಿ ಸಾಹಿತ್ಯ ಪರಿಷತ್ತಿಗೆ ಇದೆ ಎಂದು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಜಿಲ್ಲಾ ಮತ್ತು ಗಡಿನಾಡ ಘಟಕಗಳ ನೂತನ ಅಧ್ಯಕ್ಷರುಗಳಿಗೆ ನಾಡಿನ ವಿದ್ವಾಂಸರಿಂದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು, ಮಾತನಾಡಿದ ಅವರು, ಸಂವಿಧಾನದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕನ್ನು ಕನ್ನಡದ ಮನಸ್ಸುಗಳಿಗೆ ತಿಳಿಸುವ ಜವಾಬ್ದಾರಿ ಸಾಹಿತ್ಯ ಪರಿಷತ್ತಿಗೆ ಇದೆ. ಪರಿಷತ್ತಿನ ಜವಾಬ್ದಾರಿಯನ್ನು ಹೊಂದಿರುವ ತಾವು ತಮ್ಮ ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿ ಮಟ್ಟಗಳಲ್ಲಿ ಸಂವಿಧಾನದ ಸಾಕ್ಷರತೆಯನ್ನು ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.
ತರಬೇತಿ ಶಿಬಿರದ ಉದ್ಘಾಟನೆ ಮಾಡಿ ಮಾತನಾಡಿದ ಡಾ. ಹಂಪ ನಾಗರಾಜಯ್ಯ, 1915ರಲ್ಲಿ ಸ್ಥಾಪಿತಗೊಂಡು ಪ್ರಾರಂಭದಲ್ಲಿ 4 ಜನ ಆಜೀವ ಸದಸ್ಯರು, 40 ಜನ ಸದಸ್ಯರನ್ನು ಮಾತ್ರ ಹೊಂದಿದ್ದ ಪರಿಷತ್ತು, ಈ 106 ವರ್ಷಗಳಲ್ಲಿ ಮೂರುವರೆ ಲಕ್ಷ ಸದಸ್ಯರನ್ನು ಒಳಗೊಂಡಿರುವುದು ಪರಿಷತ್ತಿನ ಮೇಲಿನ ಅಗಾಧವಾದ ಗೌರವ, ವಿಶ್ವಾಸಗಳಿಗೆ ಹಿಡಿದ ಕನ್ನಡಿಯಾಗಿದೆ. ಪರಿಷತ್ತಿಗೆ ಅನೇಕರ ಕೊಡುಗೆ ಇದೆ. ಅವರ ಕೊಡುಗೆಯಿಂದ ರೂಪುಗೊಂಡಿರುವ ಪರಿಷತ್ತು ಮತ್ತಷ್ಟು ವಿಕ್ರಮಗಳನ್ನು ನಡೆಸಲು ತಾವೆಲ್ಲರೂ ಶ್ರಮವಹಿಸಿ ಕನ್ನಡದ ಕೆಲಸ ಮಾಡಿ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ ಜೋಶಿ ಆಶಯ ನುಡಿಗಳನ್ನಾಡಿದರು. ಕೇಂದ್ರ ವಿಶೇಷ ಚುನಾವಣಾಧಿಕಾರಿಗಳಾದ ಎಸ್.ಟಿ. ಮೋಹನ್‍ರಾಜು, ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಜಿ. ಶಿವರಾಜಕುಮಾರ್, ಮಾಹಿತಿ ಹಕ್ಕು ತಜ್ಞರಾದ ವೀರೇಶ, ಜಗನ್ನಾಥ ಹೇಮಾದ್ರಿ, ಕೆ. ರಾಜಕುಮಾರ್ ಅವರು ಈ ವಿಶೇಷ ಕಾರ್ಯಾಗಾರದಲ್ಲಿ ತರಬೇತಿಯನ್ನು ನೀಡಿದರು.
ತರಬೇತಿ ಶಿಬಿರದಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ನೆ.ಭ. ರಾಮಲಿಂಗಶೆಟ್ಟಿ, ಬಿ.ಎಂ. ಪಟೇಲ್ ಪಾಂಡು ಹಾಜರಿದ್ದರು.







