ನೀವು ಮಣ್ಣಿನ ಮಕ್ಕಳಲ್ಲ, ಕಲ್ಲಿನ ಮಕ್ಕಳು: ಡಿಕೆಶಿಗೆ ಕುಮಾರಸ್ವಾಮಿ ತಿರುಗೇಟು

ಮೈಸೂರು,ಫೆ.23: ಜೆಡಿಎಸ್‍ನವರು ಮಾತ್ರ ಮಣ್ಣಿನ ಮಕ್ಕಳ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀವು ಮಣ್ಣಿನ ಮಕ್ಕಳಲ್ಲ ಕಲ್ಲಿನ ಮಕ್ಕಳು ಎಂದು ವಾಗ್ದಾಳಿ ನಡೆಸಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯಕ್ಕೆ ಬಂದು ಜೆಡಿಎಸ್ ನವರು ಮಣ್ಣಿನ ಮಕ್ಕಳ ಎಂದು ಕೇಳುತ್ತೀರಿ, ನೀವೇ ಬೇಕಾದರೆ ಮಣ್ಣಿನ ಮಕ್ಕಳು ಎಂದು ಬೋರ್ಡ್ ಹಾಕಿಕೊಂಡು ಓಡಾಡಿ ಬೇಡ ಎಂದು ತಡೆಯುವವರು ಯಾರು? ಕನಕಪುರ ಭಾಗದಲ್ಲಿ ನಿಮ್ಮನ್ನು ಮಣ್ಣಿನ ಮಕ್ಕಳು ಎಂದು ಕರೆಯುವುದಿಲ್ಲ ಕಲ್ಲಿನ ಮಕ್ಕಳು ಎಂದು ಕರೆಯುತ್ತಾರೆ ಎಂದು ಕಿಡಿಕಾರಿದರು.
ಒಕ್ಕಲಿಗ ಶಾಸಕರನ್ನು ಕಾಂಗ್ರೆಸ್ ಗೆ ಸೆಳೆಯುವ ವಿಚಾರ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿದ ಕುಮಾರಸ್ವಾಮಿ, ಒಕ್ಕಲಿಗ ಮತಗಳ ಬುಟ್ಟಿಗೆ ಕೈ ಹಾಕಿದರೆ ಡಿ.ಕೆ.ಶಿವಕುಮಾರ್ ಕುತ್ತಿಗೆಗೆ ಬರಲಿದೆ ಎಂದರು.
ಈ ರೀತಿಯ ಪ್ರಕ್ರಿಯೆಗಳು ಇನ್ನೂ ನಡೆಯುತ್ತಲೇ ಇವೆ. ನಮ್ಮಲ್ಲೂ ಇಂಟೆಲಿಜೆನ್ಸ್ ರಿಪೋರ್ಟ್ ಇದೆ. ಯಾರ್ ಯಾರು ಏನೇನು ಮಾಡುತ್ತಿದ್ದಾರೆ ಗೊತ್ತಿದೆ. ಅಧಿಕಾರಕ್ಕೆ ಬರಲು ಅವರಿವರ ಮನೆ ಬಾಗಿಲು ತಟ್ಟುತ್ತಿದ್ದಾರೆ. ನಾವು ನಮ್ಮ ಎಲ್ಲ ಶಾಸಕರನ್ನು ಪ್ರೀತಿಯಿಂದ ಕಂಡಿದ್ದೇವೆ. ಪಕ್ಷದ ಶಾಸಕರು, ನಾಯಕರನ್ನು ಪ್ರೀತಿಯಿಂದ ಕಂಡಿದ್ದೇವೆ. ಇದು ಫ್ರೀಡಂ ಇರುವ ಪಕ್ಷ, ಆದರೆ ಇದರ ಹೊರತಾಗಿ ಬೇರೆಯವರ ಜೊತೆ ಕೆಲವು ಮಾತುಕತೆ ನಡೆಸುತ್ತಾರೆ. ಇವೆಲ್ಲವೂ ಸಾಮಾನ್ಯ. ನಮಗೆ ರಿವರ್ಸ್ ಆಪರೇಷನ್ ಬೇಕಾಗಿಲ್ಲ. ಕಾಂಗ್ರೆಸ್ ನಲ್ಲಿ ನಡೆಯುತ್ತಿರೋ ತಿಕ್ಕಾಟ ನೋಡಿ ಮುಂದೆ ನಮ್ಮ ಕಡೆ ಬರುತ್ತಾರೆ. ಕೊನೆ ಗಳಿಗೆಯಲ್ಲಿ ಬರುವ ನಾಯಕರಿಗೆ ಅವರದ್ದೇ ಕ್ಷೇತ್ರದಲ್ಲಿ ಟಿಕೆಟ್ ನೀಡುವುದಿಲ್ಲ ಎಂದರು.
ಒಕ್ಕಲಿಗ ಮತಗಳ ಬುಟ್ಟಿಗೆ ಕೈ ಹಾಕಿದರೆ ಡಿ.ಕೆ.ಶಿವಕುಮಾರ್ ಕುತ್ತಿಗೆಗೆ ಬರುತ್ತೆ.ದೇವೆಗೌಡರು ಬದುಕಿರೋವರೆಗೂ ಈ ಸಮಾಜ ಅವರನ್ನು ಕೈಬಿಡಲ್ಲ. ಡಿ.ಕೆ.ಶಿವಕುಮಾರ್ ಒಕ್ಕಲಿಗ ಶಾಸಕರನ್ನಾದರೂ ಸೆಳೆಯಲಿ. ಇನ್ಯಾರನ್ನಾದರೂ ಸೆಳೆಯಲಿ ನಾವು ತಲೆಕೆಡಿಸಿಕೊಳ್ಳಲ್ಲ. ದೇವೇಗೌಡರು ಇರೋವರೆಗೂ ಯಾರೂ ಏನು ಮಾಡಲು ಸಾಧ್ಯವಿಲ್ಲ. ಒಕ್ಕಲಿಗ ಶಾಸಕರಿಗೆ ಗಾಳ ಹಾಕಿರೋದು ಅವರ ಕುತ್ತಿಗೆಗೆ ಬರಲಿದೆ. ನನ್ನ ಸಂಪರ್ಕದಲ್ಲಿ ಯಾವ ಕಾಂಗ್ರೆಸ್ ಶಾಸಕರು, ಮುಖಂಡರೂ ಇಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನ ಬೆಳವಣಿಗೆ ನೋಡಿ ಆ ಪಕ್ಷದವರೇ ಬರುತ್ತಾರೆ ಎಂದು ತಿಳಿಸಿದರು.
ಸದನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಸರ್ಕಾರಿ ಶಾಲೆಯಲ್ಲಿ ಆಗಿರುವ ಅನಾಹುತಗಳೇನು ಎಂಬುದರ ಬಗ್ಗೆ ಚರ್ಚೆ ಮಾಡಲು ನಾವು ಬಂದಿದ್ದೆವು.ಆದರೆ ಸದನ ನಡೆಸಲು ಬಿಡಲಿಲ್ಲ.ಹಿಜಾಬ್ ವಿಚಾರವನ್ನ ಕಾಂಗ್ರೆಸ್ ಸದನದಲ್ಲಿ ಪ್ರಸ್ತಾಪ ನಡೆಸಲು ಇಷ್ಟ ಇರಲಿಲ್ಲ ಈ ಕಾರಣ ಈಶ್ವರಪ್ಪ ರಾಜೀನಾಮೆ ನೆಪ ಹೇಳಿ ಸದನ ಅಡ್ಡಿ ಪಡಿಸಿದರು ಎಂದು ಹರಿಹಾಯ್ದರು.
ಈ ಎರಡು ಪಕ್ಷಗಳು ಮುಂದಿನ ಚುನಾವಣೆ ದೃಷ್ಟಿಯಿಂದ ಸಜ್ಜಾಗುತ್ತಿವೆ. ಈ ಎರಡು ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು. ಚುನಾವಣಾ ದೃಷ್ಟಿಯಿಂದ ರಾಷ್ಟ್ರೀಯ ಪಕ್ಷಗಳಿಗೆ ಇಂತಹ ಗಲಾಭೆಗಳು ಬೇಕು. ಶಿವಮೊಗ್ಗ ಹತ್ಯೆ ವಿಚಾರಕ್ಕೂ ಹಿಜಾಬ್ ವಿಚಾರಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.
ಆ ವ್ಯಕ್ತಿಗೆ ಹಿಂದಿನಿಂದಲೂ ಅಪಾಯವಿತ್ತು ಎಂದು ಅವರ ಮನೆಯವರೇ ಹೇಳಿದ್ದಾರೆ.ಈ ಹುಡುಗ ಯಾವ ಸಮುದಾಯ ಎಂದು ತಿಳಿದುಕೊಳ್ಳಲಿ. ಕೋಮು ಗಲಭೆಯಲ್ಲಿ ರಾಜಕಾರಣಿಗಳ ಮಕ್ಕಳು ಸಾವನ್ನಪ್ಪುವುದಿಲ್ಲ. ಇವರ ಮಕ್ಕಳು ಸಂಘರ್ಷಕ್ಕೆ ಹೋಗುವುದಿಲ್ಲ. ಇಂತಹ ಗಲಭೆಗಳಿಗೆ ಬಡವರ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.







