ಮಂಗಳೂರು: ಮಹಿಳಾ ಸಬಲೀಕರಣ ಯೋಜನೆಗಳ ಲಾಭ ಪಡೆಯಲು ದ.ಕ. ಜಿಪಂ. ಸಿಇಒ ಕರೆ
ಮಂಗಳೂರು: ಮಹಿಳೆಯರ ಸಬಲೀಕರಣಕ್ಕಾಗಿ ಸರಕಾರ ಜಾರಿಗೊಳಿಸಿರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸ್ತ್ರೀಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ದ.ಕ. ಜಿಪಂ ಸಿಇಒ ಡಾ. ಕುಮಾರ್ ಕರೆ ನೀಡಿದರು.
ಸ್ವಚ್ಚ ಭಾರತ್ ಮಿಷನ್ ವತಿಯಿಂದ ಬೆಂಗಳೂರಿನ ಸಾಹಸ್ ಸಂಸ್ಥೆ, ಸಂಜೀವಿನಿ-ಕೆಎಸ್‌ಆರ್‌ಎಲ್‌ಪಿಎಸ್ ಸಂಸ್ಥೆಯ ಸಹಯೋಗದಲ್ಲಿ ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ನಡೆದ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರಿಗೆ ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆ ಕುರಿತ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಜೀವಿನಿ ಒಕ್ಕೂಟವನ್ನು ಬಳಸಿಕೊಳ್ಳುವ ಮೂಲಕ ಮಹಿಳೆಯರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದಾಗಿದೆ. ಅದಕ್ಕಾಗಿ ಭಿನ್ನವಾಗಿ, ಕ್ರಿಯಾತ್ಮಕವಾಗಿ ಆಲೋಚಿಸಿ ಅವುಗಳನ್ನು ಅನುಷ್ಠಾನಗೊಳಿಸಬೇಕು. ಆ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಡಾ.ಕುಮಾರ್ ಹೇಳಿದರು.
ಜಿಲ್ಲೆಯಲ್ಲಿರುವ ಸುಮಾರು 5 ಸಾವಿರ ಸ್ವಸಹಾಯ ಗುಂಪುಗಳ 55 ಸಾವಿರ ಮಹಿಳಾ ಸದಸ್ಯರು ಈ ಎಲ್ಲ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ತ್ಯಾಜ್ಯವನ್ನು ಆದಾಯದ ಮೂಲಗಳಾಗಿ ನೋಡಬೇಕು. ಕಸದಿಂದ ರಸ ಎಂಬ ಪರಿಕಲ್ಪನೆಯನ್ನು ಮೈಗೂಡಿಸಿಕೊಂಡು ವಿವಿಧ ರೀತಿಯ ಉತ್ಪನ್ನ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಜಿಪಂನಲ್ಲಿ ಮಹಿಳಾ ಸಬಲೀಕರಣದ ಉದ್ದೇಶಕ್ಕಾಗಿ ನೂತನವಾಗಿ ಕೌಶಲಾಭಿವೃದ್ದಿ ಉದ್ಯಮಶೀಲತೆ ಎಂಬ ಘಟಕ ತೆರೆಯಲಾಗಿದೆ. ಅದರ ಪ್ರಯೋಜನ ಪಡೆದುಕೊಳ್ಳುವಂತೆ ಡಾ. ಕುಮಾರ್ ತಿಳಿಸಿದರು.
ತ್ಯಾಜ್ಯದಿಂದ ಜೈವಿಕ ಗೊಬ್ಬರ ತಯಾರಿಕೆ, ಕೈತೋಟ ನಿರ್ಮಾಣ, ಸಾವಯವ ತರಕಾರಿ ಬೆಳೆ, ಅಣಬೆ ಬೇಸಾಯ, ತ್ಯಾಜ್ಯದಿಂದ ಜೈವಿಕ ಕಿಣ್ವ, ಸಾಬೂನು ತಯಾರಿಕೆ, ಬಟ್ಟೆಚೀಲ, ಬಟ್ಟೆ ಪ್ಯಾಡ್ ತಯಾರಿಕೆಗಳ ಬಗ್ಗೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಯಕ ನಿರ್ದೇಶಕ ಪ್ರವೀಣ್ ಮತ್ತು ಸ್ವಚ್ಚ ಭಾರತ್ ಮಿಷನ್‌ನ ಸಂಯೋಜಕ ನವೀನ್ ಮಾಹಿತಿ ನೀಡಿದರು.
ಸ್ವಚ್ಚ ಭಾರತ್ ಮಿಷನ್‌ನ ನೋಡಲ್ ಅಧಿಕಾರಿ ಆನಂದ ಕುಮಾರ್, ಸಹಾಯಕ ಯೋಜನಾಧಿಕಾರಿ ಫೆಲಿಕ್ಸ್ ಡಿಮೆಲ್ಲೊ, ಉಪ ಸಹಾಯಕ ಯೋಜನಾಧಿಕಾರಿ ಸರೋಜಿನಿ, ಸಾಹಸ್ ಸಂಸ್ಥೆಯ ಯೋಜನಾ ನಿರ್ವಾಹಕ ಸುದೇಶ್ ಕುಮಾರ್, ಸ್ವಚ್ಚ ಭಾರತ್‌ಮಿಷನ್‌ನ ಯೋಜನಾಧಿಕಾರಿಗಳಾದ ಪವನ್ ಕೆ, ದೊಂಬಯ್ಯ, ಮಂಗಳೂರು ತಾಪಂ ಇಒ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.







