ಶ್ರೀಲಂಕಾ: ಬಿಗಡಾಯಿಸಿದ ಆರ್ಥಿಕ ಬಿಕ್ಕಟ್ಟು; ದೇಶದೆಲ್ಲೆಡೆ ವಿದ್ಯುತ್ ಕಡಿತ ಜಾರಿ

ಸಾಂದರ್ಭಿಕ ಚಿತ್ರ
ಕೊಲಂಬೊ, ಫೆ.23: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಬಿಗಡಾಯಿಸಿದ್ದು ವಿದ್ಯುತ್ ಉತ್ಪಾದನೆಯ ಮೂಲಸೌಕರ್ಯದ ಕೊರತೆಯಿಂದ ಹಲವು ವಿದ್ಯುತ್ ಉತ್ಪಾದನಾ ಘಟಕಗಲ್ಲಿ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ. ದೇಶದಾದ್ಯಂತ ವಿದ್ಯುತ್ ಕಡಿತ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೋಮವಾರ ಮತ್ತು ಮಂಗಳವಾರ ದೇಶದ ಎಲ್ಲಾ ಪ್ರಾಂತಗಳಲ್ಲಿ ಬೆಳಿಗ್ಗೆ 8:30ರಿಂದ 2 ಗಂಟೆ ವಿದ್ಯುತ್ ಕಡಿತ ಮಾಡಲಾಗಿದ್ದು ಬುಧವಾರ ದೇಶದ ವಿದ್ಯುತ್ ಸ್ಥಾವರವನ್ನು ನಾಲ್ಕೂವರೆ ಗಂಟೆ ಮುಚ್ಚಲಾಗಿತ್ತು ಎಂದು ಶ್ರೀಲಂಕಾದ ಲೋಕೋಪಯೋಗಿ ಇಲಾಖೆ ಹೇಳಿದೆ. ಇಂಧನ ಕೊರತೆಯಿಂದ ವಿದ್ಯುತ್ ಉತ್ಪಾದನೆಗೆ ಅಡ್ಡಿಯಾಗಿದ್ದು ರಾಷ್ಟ್ರೀಯ ವಿದ್ಯುತ್ ಸ್ಥಾವರಕ್ಕೆ ಸುಮಾರು 700 ಮೆಗಾವ್ಯಾಟ್ ವಿದ್ಯುತ್ ಕೊರತೆಯಾಗಿದೆ. ಕಳೆದ ಹಲವು ವಾರಗಳಲ್ಲಿ ಶ್ರೀಲಂಕಾದ ಜನತೆ ನಿರಂತರ ವಿದ್ಯುತ್ ಕಡಿತದ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶಕ್ಕೆ ಇಂಧನ ಕೊರತೆ ಎದುರಾಗಿದೆ, ವಿದ್ಯುತ್ ಕೊರತೆಯಲ್ಲ ಎಂದು ಲೋಕೋಪಯೋಗಿ ಇಲಾಖೆಯ ಅಧ್ಯಕ್ಷ ಜನಕ ರಾಜಪಕ್ಸ ಹೇಳಿದ್ದಾರೆ. ದೇಶದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿರುವುದು ಸಮಸ್ಯೆ ಇನ್ನಷ್ಟು ತೀವ್ರಗೊಳ್ಳಲು ಕಾರಣವಾಗಿದೆ ಎಂದವರು ಹೇಳಿದ್ದಾರೆ.
ಶ್ರೀಲಂಕಾದಲ್ಲಿ ವಿದೇಶಿ ವಿನಿಮಯ ದಾಸ್ತಾನು ಕನಿಷ್ಟ ಮಟ್ಟಕ್ಕೆ ಕುಸಿದ ಕಾರಣ ದೇಶ ತೀವ್ರ ಆರ್ಥಿಕ ಬಿಕ್ಕಟ್ಟಿನ ಅಂಚಿನಲ್ಲಿದೆ. ಕಲ್ಲಿದ್ದಲು, ಪೆಟ್ರೋಲ್ ಸಹಿತ ವಿದ್ಯುತ್ ಉತ್ಪಾದಿಸುವ ಇಂಧನವನ್ನು ಆಮದು ಮಾಡಿಕೊಳ್ಳಲು ಆರ್ಥಿಕ ಕೊರತೆ ಎದುರಾಗಿದೆ. ಜತೆಗೆ ಪೆಟ್ರೋಲ್, ಡೀಸೆಲ್, ದೈನಂದಿನ ಬಳಕೆಯ ವಸ್ತುಗಳ ತೀವ್ರ ಕೊರತೆಯಿದೆ. ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನೇ ಆದಾಯ ಮೂಲವಾಗಿ ನೆಚ್ಚಿಕೊಂಡಿರುವ ಶ್ರೀಲಂಕಾಕ್ಕೆ ಕೊರೋನ ಸೋಂಕಿನ ಸಮಸ್ಯೆ ಭಾರೀ ಆಘಾತ ನೀಡಿದ್ದು ಕಳೆದ 2 ವರ್ಷಗಳಲ್ಲಿ ಸುಮಾರು 14 ಬಿಲಿಯನ್ ಡಾಲರ್ನಷ್ಟು ಆದಾಯವನ್ನು ದೇಶ ಕಳೆದುಕೊಂಡಿದೆ. ಡಿಸೆಂಬರ್ನಲ್ಲಿ ಹಣದುಬ್ಬರದ ಪ್ರಮಾಣ 12.1%ಕ್ಕೆ ಏರಿಕೆಯಾಗಿದೆ.
ಬೃಹತ್ ಪ್ರಮಾಣದ ಸಾಲ ಪಡೆದಿರುವ ಶ್ರೀಲಂಕಾ ಸರಕಾರ ಈಗ ತಕ್ಷಣಕ್ಕೆ 12.5 ಬಿಲಿಯನ್ ಡಾಲರ್ ಅಂತರಾಷ್ಟ್ರೀಯ ಸೊವರಿನ್ ಬಾಂಡ್(ಸಾಲ ಪಡೆಯಲು ಸರಕಾರ ಖಾತರಿ ನೀಡಿರುವ ವ್ಯವಸ್ಥೆ) ಸಾಲ ತೀರಿಸಬೇಕಿದೆ. 2022ರಲ್ಲಿ ಶ್ರೀಲಂಕಾ ಪಾವತಿಸಬೇಕಿರುವ ಅಂತರಾಷ್ಟ್ರೀಯ ಸಾಲದ ಪ್ರಮಾಣ 7 ಬಿಲಿಯನ್ ಡಾಲರ್ಗೂ ಅಧಿಕವಾಗಿದೆ ಎಂದು ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ನ ಹೇಳಿಕೆ ತಿಳಿಸಿದೆ.







