ಪರಮಾಣು ಮಾತುಕತೆ ಸೂಕ್ಷ್ಮ ಹಂತಕ್ಕೆ ತಲುಪಿದೆ: ಇರಾನ್

ಸಾಂದರ್ಭಿಕ ಚಿತ್ರ
ಟೆಹ್ರಾನ್, ಫೆ.23: ವಿಯೆನ್ನಾದಲ್ಲಿ ಇರಾನ್ ಹಾಗೂ ವಿಶ್ವದ ಬಲಿಷ್ಟ ದೇಶಗಳ ಮಧ್ಯೆ ನಡೆಯುತ್ತಿರುವ ಪರಮಾಣು ಮಾತುಕತೆ ಸೂಕ್ಷ್ಮ ಹಂತಕ್ಕೆ ತಲುಪಿದ್ದು ಉಳಿದ ವಿಷಯಗಳನ್ನು ಇತ್ಯರ್ಥಗೊಳಿಸಲು ಪಾಶ್ಚಿಮಾತ್ಯ ದೇಶಗಳು ವಾಸ್ತವಿಕ ನಿಲುವು ತಳೆಯುವ ಅಗತ್ಯವಿದೆ ಎಂದು ಇರಾನ್ ನ ವಿದೇಶ ವ್ಯವಹಾರ ಸಚಿವ ಹೊಸೈನ್ ಅಮೀರಬ್ದುಲ್ಲಾಹಿಯಾನ್ ಬುಧವಾರ ಹೇಳಿದ್ದಾರೆ.
ಇರಾನ್ಗೆ ಭೇಟಿ ನೀಡಿರುವ ಒಮಾನ್ನ ವಿದೇಶ ಸಚಿವರೊಂದಿಗೆ ಟೆಹ್ರಾನ್ ನಲ್ಲಿ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ವಿಯೆನ್ನಾದಲ್ಲಿ ಇರಾನ್- ವಿಶ್ವದ ಬಲಿಷ್ಟ ದೇಶಗಳ ನಡುವೆ ನಡೆಯುತ್ತಿರುವ ಪರಮಾಣು ಮಾತುಕತೆ ಫಲಪ್ರದವಾಗುವ ಲಕ್ಷಣ ಗೋಚರಿಸುತ್ತಿದ್ದು, ಅಮೆರಿಕ-ಇರಾನ್ ಮಧ್ಯೆ ಒಪ್ಪಂದ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ರಾಯ್ಟರ್ಸ್ ಕಳೆದ ವಾರ ವರದಿ ಮಾಡಿತ್ತು. 2015ರಲ್ಲಿ ಇರಾನ್ ಮತ್ತು ವಿಶ್ವದ ಬಲಿಷ್ಟ ದೇಶಗಳ ನಡುವಿನ ಒಪ್ಪಂದವು ಇರಾನ್ನ ಯುರೇನಿಯಂ ಸಂಸ್ಕರಿಸುವ ಸಾಮರ್ಥ್ಯವನ್ನು ಸೀಮಿತಗೊಳಿಸಿದ್ದರಿಂದ ಪರಮಾಣು ಶಸ್ತ್ರ ಅಭಿವೃದ್ಧಿಗೆ ಸಾಕಾಗುವಷ್ಟು ಯುರೇನಿಯಂ ಸಂಸ್ಕರಿಸಲು ಇರಾನ್ಗೆ ಅಡ್ಡಿಯಾಗಿತ್ತು. ಆದರೆ 2018ರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದು ಇರಾನ್ ಕೂಡಾ 2015ರ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಹೇಳಿತ್ತು.





