ಕೋಮುದ್ವೇಷ ಹರಡುವ ಮೂಲಕ ರಾಜಕೀಯ ಮಾಡುತ್ತಿರುವ ಶಾಸಕ ಹರೀಶ್ ಪೂಂಜ: ಶಾಹುಲ್ ಹಮೀದ್

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್
ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರು ಕೋಮುದ್ವೇಷ ಹರಡುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಚುನಾವಣಾ ಗೆಲುವಿಗಾಗಿ ಅವರು ಇಂತಹ ಕಾರ್ಯ ಮಾಡುತ್ತಿದ್ದು, ಇದು ಶಾಸಕರಿಗೆ ಶೋಭೆ ತರುವುದಿಲ್ಲ. ಕೋಮು ಧ್ವೇಷ ಹರಡುವ ಬದಲು ಶಾಂತಿ ಸೌಹಾರ್ದತೆಯನ್ನು ಕಾಪಾಡಲಿ, ತಾಲೂಕಿನ ಅಭಿವೃದ್ಧಿಗೆ ಗಮನಹರಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಹೇಳಿದ್ದಾರೆ.
ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಶಾಸಕ ಹರೀಶ್ ಪೂಂಜಾ ಸಮಾನತೆಯ ಆಧಾರದಲ್ಲಿ ಹಿಜಾಬ್ ಧರಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಇದಕ್ಕೆ ಅವಕಾಶ ಕೊಟ್ಟರೆ ಮುಂದೆ ಮೂರು ಹೊತ್ತಿನ ನಮಾಝ್ ಮಾಡಲು ಅವಕಾಶ ಕೇಳುತ್ತಾರೆ ಎಂದಿದ್ದು, ಇದು ಶಾಸಕ ಸ್ಥಾನಕ್ಕೆ ಶೋಭೆಯಲ್ಲ ಎಂದರು.
ಅಲ್ಪಸಂಖ್ಯಾತರು ಯಾವತ್ತೂ ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ವಿರೋಧ ಮಾಡಿದವರಲ್ಲ. ಶಾಸಕರು ಸುಳ್ಳು ಹೇಳುವ ಮೂಲಕ ಅಮಾಯಕ ಜನರ ಭಾವನೆಗಳನ್ನು ಕೆರಳಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಈಗಾಗಲೇ ತಾಲೂಕಿನಲ್ಲಿ ಮರಳುಗಾರಿಕೆ ಸಹಿತ ಹಲವಾರು ಅಕ್ರಮಗಳು ನಡೆಯುತ್ತಿದ್ದು ಇದಕ್ಕೆ ಶಾಸಕರೇ ಬೆಂಬಲ ನೀಡುತ್ತಿದ್ದಾರೆ. ಶಾಸಕರು ಸೋಲಿನ ಭಯದಿಂದ ಸಮಾಜದಲ್ಲಿ ಅಶಾಂತಿಯನ್ನು ನಿರ್ಮಿಸಿ ಮತ ಪಡೆಯುವ ತಂತ್ರವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರ ಬಿಜೆಪಿ ಆಡಳಿತದಲ್ಲಿದ್ದು, ಎಲ್ಲಾ ರಂಗಗಳಲ್ಲಿಯೂ ವಿಫಲರಾಗಿರುವ ಸರಕಾರ ಜನತೆಯ ಮುಂದೆ ಹೋಗಲು ನಾಚಿಕೆಪಡುತ್ತಿದೆ. ಬೆಲೆ ಏರಿಕೆ, ಭ್ರಷ್ಟಾಚಾರ, ವಿದ್ಯಾರ್ಥಿಗಳಿಗೆ ಭದ್ರತೆ ಇಲ್ಲದ ಸ್ಥಿತಿ, ಉದ್ಯೋಗವಿಲ್ಲದೆ ಯುವಜನತೆ ತತ್ತರಿಸಿದ್ದು, ಈ ಎಲ್ಲಾ ಕಾರಣದಿಂದ ಬಿಜೆಪಿಗೆ ಸೋಲುವ ಭಯ ಎದುರಾಗಿದೆ. ರಾಜ್ಯದಲ್ಲಿ ಹಿಜಾಬ್ ಪ್ರಕರಣವನ್ನು ರಾಜಕೀಯಗೊಳಿಸಿದ ಬಿಜೆಪಿ ಇಡೀ ದೇಶದಲ್ಲೇ ಕರ್ನಾಟಕವನ್ನು ತಲೆತಗ್ಗಿಸುವಂತೆ ಮಾಡಿದೆ ಎಂದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡರುಗಳಾದ ಸಲೀಂ ಗುರುವಾಯನಕೆರೆ, ಅಬ್ದುಲ್ ರಹಿಮಾನ್ ಪಡ್ಪು, ಅಶ್ರಫ್ ನೆರಿಯಾ, ಪಿ. ಟಿ ಸೆಬಾಸ್ಟಿಯನ್ ಕಳೆಂಜ, ಕರೀಂ ಗೇರುಕಟ್ಟೆ ಉಪಸ್ಥಿತರಿದ್ದರು.







