ಈ ವಂಚನೆಗಳೇಕೆ ಸುದ್ದಿಯಾಗುತ್ತಿಲ್ಲ?
ಮಾನ್ಯರೇ,
ದೇಶದ ಅತಿದೊಡ್ಡ ಬ್ಯಾಂಕಿಂಗ್ ವಂಚನೆ ಪ್ರಕರಣವೊಂದು ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಗುಜರಾತಿನ ಎಬಿಜಿ ಶಿಪ್‌ಯಾರ್ಡ್ 28 ಬ್ಯಾಂಕ್‌ಗಳಿಗೆ 22,842 ಕೋಟಿ ರೂಪಾಯಿಗಳ ವಂಚನೆ ನಡೆಸಿದೆಯೆಂದು ವರದಿಗಳು ಬರುತ್ತಿವೆ. ದೇಶದ ಇತಿಹಾಸದಲ್ಲೇ ಅಧಿಕ ಮೊತ್ತದ ಬ್ಯಾಂಕಿಂಗ್ ವಂಚನೆ ಇದಾಗಿದೆ.
ದೇಶದಲ್ಲಿ ಸತತವಾಗಿ ಬ್ಯಾಂಕ್‌ಗಳನ್ನು ವಂಚಿಸಲಾಗುತ್ತಿದೆ. ಆದರೆ ಇಂತಹ ಗಂಭೀರ ವಿಷಯದ ಬಗ್ಗೆ ಮಾಧ್ಯಮಗಳು ಮೌನವಹಿಸಿವೆ. ಈ ವಂಚನೆ ಪ್ರಕರಣ ಇಡೀ ಬ್ಯಾಂಕಿಂಗ್ ಅವ್ಯವಸ್ಥೆಗೆ ಕನ್ನಡಿ ಹಿಡಿದಂತಿದೆ.
ದೊಡ್ಡವರ ವಂಚನೆಗಳು ಈಗ ಸುಲಭವಾಗಿ ಬಿಟ್ಟಿವೆ. ಕೆಲವು ಸಮಯದ ಹಿಂದೆಯಷ್ಟೇ ಆಭರಣ ವ್ಯಾಪಾರಿ ನೀರವ್ ಮೋದಿ ಬ್ಯಾಂಕುಗಳಿಗೆ ಸಾವಿರಾರು ಕೋಟಿ ಪಂಗನಾಮ ಹಾಕಿ ದೇಶ ಬಿಟ್ಟು ವಿದೇಶಕ್ಕೆ ಪರಾರಿಯಾದದ್ದನ್ನು ದೇಶದ ಜನತೆ ಮರೆತಿಲ್ಲ. ಆದರೆ ಈ ದೇಶದ ಅನ್ನದಾತ ಸಾಲ ಮರುಪಾವತಿಸದ ಸ್ಥಿತಿಯಲ್ಲಿ ಆತ್ಮಹತ್ಯೆಗೆ ಶರಣರಾಗುತ್ತಾನೆ. ಬ್ಯಾಂಕ್ ಮತ್ತು ಖಾಸಗಿ ಫೈನಾನ್ಸ್ ಕಂಪೆನಿಗಳು ದರ್ಪ ತೋರಿಸಿ, ಹಿಂಸೆ ಕೊಟ್ಟು ಅವರನ್ನು ಮಾಡು ಇಲ್ಲವೇ ಮಡಿ ಅನ್ನುವ ಸ್ಥಿತಿಗೆ ತಂದು ನಿಲ್ಲಿಸುತ್ತವೆ. ನಿತ್ಯ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತವೆ. ದೇಶದ ಬೆನ್ನೆಲುಬು ಮುರಿದು ಹಾಕುತ್ತಿರುವ ಕೃಷಿ ಸಾಲದ ಬಗ್ಗೆ ಸರಕಾರ ಗಂಭೀರತೆ ತೋರುತ್ತಿಲ್ಲ. ಸಾಮಾನ್ಯ ಜನತೆ ಬಾಂ್ಯಕೊಂದರಿಂದ ಸಾಲ ಪಡೆಯಲು ಪಡಬೇಕಾದ ಕಷ್ಟ ಸಾಮಾನ್ಯವಲ್ಲ. ಆದರೆ ಬ್ಯಾಂಕ್‌ಗಳು ಉದ್ಯಮ ವಲಯಕ್ಕೆ ಸುಲಭವಾಗಿ ದೊಡ್ಡ ಮೊತ್ತದ ಸಾಲ ಮಂಜೂರು ಮಾಡುತ್ತವೆೆ. ಜನತೆ ಈ ದೊಡ್ಡ ಬ್ಯಾಂಕಿಗ್ ಹಗರಣದ ಕುರಿತು ಪ್ರಧಾನಿ ಮಾತನಾಡಬೇಕು ಎಂದು ಬಯಸುತ್ತಿದ್ದಾರೆ. ಸಾರ್ವಜನಿಕರ ಪ್ರಶ್ನೆಗಳಿಗೆ ಸರಕಾರ ಉತ್ತರಿಸುತ್ತಿಲ್ಲ. ಇತ್ತ ಮಾಧ್ಯಮಗಳಿಗೂ ಇದು ಬ್ರೇಕಿಂಗ್ ನ್ಯೂಸ್ ಅಲ್ಲ. ಮಾಧ್ಯಮಗಳು 24/7 ಸರಕಾರದ ಬೇಳೆ ಬೇಯಿಸುವುದರಲ್ಲಿ ನಿರತವಾಗಿವೆ. ಅಂತೂ ಪ್ರಧಾನಿಯವರ 'ಕ್ಯಾಶ್‌ಲೆಸ್ ಇಂಡಿಯಾ'ದ ಕನಸು ಈ ಮೂಲಕ ನನಸಾಗುತ್ತಿದೆ.





