ವಿದ್ಯಾರ್ಥಿ ನಾಯಕ ಅನೀಸ್ ಖಾನ್ ಕೊಲೆ ಪ್ರಕರಣ: ಗೃಹರಕ್ಷಕದಳದ ಸಿಬ್ಬಂದಿ ಸಹಿತ ಇಬ್ಬರ ಬಂಧನ

ಹೊಸದಿಲ್ಲಿ: ವಿದ್ಯಾರ್ಥಿ ನಾಯಕ ಅನೀಸ್ ಖಾನ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಓರ್ವ ಗೃಹರಕ್ಷಕದಳದ ಸಿಬ್ಬಂದಿ ಹಾಗೂ ಓರ್ವ ನಾಗರಿಕ ಸ್ವಯಂಸೇವಕನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಹೋಂಗಾರ್ಡ್ ಕಾಶಿನಾಥ್ ಬೇರಾ ಹಾಗೂ ಆಮ್ಟಾ ಪೊಲೀಸ್ ಠಾಣೆಯ ನಾಗರಿಕ ಸ್ವಯಂಸೇವಕ ಪ್ರೀತಮ್ ಭಟ್ಟಾಚಾರ್ಯ ಎಂದು ಗುರುತಿಸಲಾಗಿದೆ. ಇವರಿಬ್ಬರನ್ನು ವಿಚಾರಣೆಗೊಳಪಡಿಸಿದ ಬಳಿಕ ಬಂಧಿಸಲಾಯಿತೆಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮನೋಜ್ ಮಾಳವೀಯ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302(ಕೊಲೆ) ಅನ್ವಯ ಮೊಕದ್ದಮೆ ದಾಖಲಿಸಲಾಗಿದ. ಕಾಶಿನಾಥ್ ಬೇರಾ ಹಾಗೂ ಇನ್ನಿಬ್ಬರು ಪೊಲೀಸ್ ಸಿಬ್ಬಂದಿಯನ್ನು ಮಂಗಳವಾರ ಅಮಾನತುಗೊಳಿಸಲಾಗಿದೆ ಎಂದವರು ಹೇಳಿದ್ದಾನೆ.
ಫೆಬ್ರವರಿ 18ರಂದು ಮಧ್ಯರಾತ್ರಿಯ ವೇಳೆ ಪೊಲೀಸ್ ಸಮವಸ್ತ್ರದಲ್ಲಿದ್ದ ನಾಲ್ವರು ಹಾಗೂ ನಾಗರಿಕ ಕಾರ್ಯಕರ್ತರು ಅನೀಸ್ ಖಾನ್ ರನ್ನು ಅವರ ಮನೆಯ ಮೂರನೆ ಮಹಡಿಯಿಂದ ಕೆಳಗೆ ದೂಡಿ ಹತ್ಯೆ ಮಾಡಿದ್ದಾರೆಂದು ಮೃತ ಯುವಕನ ಕುಟುಂಬಿಕರು ಆರೋಪಿಸಿದ್ದಾರೆ.
ಆದರೆ ಆರೋಪ ನಿರಾಕರಿಸಿರುವ ಪೊಲೀಸರು ಆ ರಾತ್ರಿ ಅನೀಸ್ ಖಾನ್ ಮನೆಗೆ ಯಾವುದೇ ಪೊಲೀಸ್ ಅಧಿಕಾರಿಗಳು ತೆರಳಿಲ್ಲವೆಂದು ಹೇಳಿದ್ದಾರೆ.
ಖಾನ್ ಸಾವಿನ ಪ್ರಕರಣದ ತನಿಖೆಗಾಗಿ ಪಶ್ಚಿಮ ಬಂಗಾಳದ ಟಿಎಂಸಿ ಸರಕಾರ ವಿಶೇಷ ತನಿಖಾ ತಂಡ (ಸಿಟ್)ವನ್ನು ರಚಿಸಿದೆ. ಆದರೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಖಾನ್ ಕುಟುಂಬಿಕರು ಪಟ್ಟುಹಿಡಿದಿದ್ದಾರೆ.
ಟಿಎಂಸಿ ಸರಕಾರದ ಕಟು ಟೀಕಾಕಾರನಾಗಿದ್ದ ಖಾನ್ ಅವರ ಸಾವಿನ ತನಿಖೆಗೆ ಆಗ್ರಹಿಸಿ ರಾಜ್ಯಾದ್ಯಂತ ವಿವಿಧ ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.ಸಿಪಿಎಂ ಬೆಂಬಲಿತ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಯ ನಾಯಕನಾಗಿದ್ದ ಅನೀಸ್ ಖಾನ್ ಅವರು ಪೌರತ್ವ ತಿದ್ದುಪಡಿ ವಿರೋಧಿ ಕಾಯ್ದೆ ಚಳವಳಿಯ ಮುಂಚೂಣಿಯಲ್ಲಿದ್ದರು. ಅನಂತರ ಅವರು ಅಬ್ಬಾಸ್ ಸಿದ್ದೀಕಿ ನೇತೃತ್ವದ ಭಾರತೀಯ ಜಾತ್ಯತೀತ ವೇದಿಕೆಗೆ ಸೇರ್ಪಡೆಗೊಂಡಿದ್ದರು.







