ಹಿಜಾಬ್‌ಧಾರಿ ವಿದ್ಯಾರ್ಥಿನಿಯರಿಗೆ ತರಗತಿಗೆ ಬಹಿಷ್ಕಾರ: 10 ದಿನಗಳಿಂದ ಶಾಲಾ ವಠಾರದಲ್ಲೇ ಕುಳಿತಿರುವ ವಿದ್ಯಾರ್ಥಿನಿಯರು
ಕೊಡಗಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಘಟನೆ

ಸಿದ್ದಾಪುರ: ಹಿಜಾಬ್‌ಧಾರಿ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಕಳೆದ 10 ದಿನಗಳಿಂದ ವಿದ್ಯಾರ್ಥಿನಿಯರು ಶಾಲೆಯ ವಠಾರದಲ್ಲೇ ಕುಳಿತು ಪಾಠ ಕಲಿಯುತ್ತಿರುವುದು ಕುಶಾಲನಗರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ (ಸರಕಾರಿ) ವಿದ್ಯಾರ್ಥಿನಿಯರು ಸಮವಸ್ತ್ರದೊಂದಿಗಿರುವ ಶಾಲನ್ನು ತಲೆಗೆ ಧರಿಸಿಯೇ ಇಷ್ಟು ವರ್ಷಗಳ ಕಾಲ ಶಾಲೆಗೆ ಬರುತ್ತಿದ್ದರು. ಇದೀಗ ಹೈಕೋರ್ಟ್‌ನ ಆದೇಶ ಇರುವುದರಿಂದ ಹಿಜಾಬ್ ಧರಿಸಿ ಶಾಲಾ ಪ್ರವೇಶಕ್ಕೆ ಮುಖ್ಯೋಪಾಧ್ಯಾಯರು ಅವಕಾಶ ನಿರಾಕರಿಸಿರುವುದಿಂದ ವಿದ್ಯಾರ್ಥಿನಿಯರು ಶಾಲೆಯ ವಠಾರ ದಲ್ಲೇ ಕುಳಿತುಕೊಳ್ಳುತ್ತಿದ್ದಾರೆ.
ನಮ್ಮ ಸಮವಸ್ತ್ರದ ಜೊತೆಗಿರುವ ಶಾಲನ್ನು ತಲೆಗೆ ಹಾಕಲು ಅವಕಾಶ ನೀಡಬೇಕು. 8, 9 ಮತ್ತು 10ನೇ ತರಗತಿಯಲ್ಲಿ ಒಟ್ಟು 45 ಮುಸ್ಲಿಮ್ ವಿದ್ಯಾರ್ಥಿನಿಯರಿದ್ದಾರೆ. ಅಲ್ಲದೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯ ರಿಗೂ ಶಾಲಾ ಪ್ರವೇಶ ನಿರಾಕರಿಸಲಾಗಿದೆ ಎಂದು ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ನಾವು ಯಾವುದೇ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡುತ್ತಿಲ್ಲ. ನ್ಯಾಯಾಲಯದ ಆದೇಶವನ್ನು ನಾವು ಪಾಲಿಸಲೇ ಬೇಕಾಗಿದೆ. ಈ ಹಿಂದೆ ಮಕ್ಕಳು ಶಾಲನ್ನು ತಲೆಗೆ ಹಾಕಿ ಬರುತ್ತಿದ್ದರು. ಆದರೆ ನ್ಯಾಯಾಲಯದ ಮುಂದೆ ನಾವು ಏನೂ ಅಲ್ಲ. ನ್ಯಾಯಾಲಯದ ಆದೇಶವನ್ನು ಗೌರವಿಸುವುದು ನಮ್ಮ ಧರ್ಮ ಎಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅಚ್ಚಯ್ಯ ಹೇಳಿದ್ದಾರೆ.
ಪಿಯುಸಿ ವಿದ್ಯಾರ್ಥಿಗಳಿಗೂ ಪ್ರವೇಶ ನಿರಾಕರಣೆ: ಹಿಜಾಬ್ ಧರಿಸಿ ಬರುತ್ತಿರುವ ನೆಲ್ಯಹುದಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಕೂಡ ಕಳೆದ 8 ದಿನಗಳಿಂದ ಕಾಲೇಜು ಪ್ರವೇಶ ಇಲ್ಲದೆ ವಠಾರದಲ್ಲೇ ಕುಳಿತು ಕೊಳ್ಳುತ್ತಿದ್ದಾರೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿಯ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪ್ರತಿದಿನ ಕಾಲೇಜಿಗೆ ಬರುತ್ತಿದ್ದು, ನ್ಯಾಯಾಲಯದ ಆದೇಶದಂತೆ ಹಿಜಾಬ್ ಧರಿಸಲು ಪ್ರಾಂಶುಪಾಲರು ಅವಕಾಶ ನಿರಾಕರಣೆ ಮಾಡಿರುವುದರಿಂದ ವಿದ್ಯಾರ್ಥಿನಿಯರು ಕಾಲೇಜಿನ ವಠಾರದಲ್ಲೇ ಕುಳಿತು, ಬಳಿಕ ಮನೆಗೆ ವಾಪಸ್ ಹೋಗುತ್ತಿದ್ದಾರೆ ಎಂದು ತಿಳಿದು ಬಂದಿದೆ.







