ಫೆ. 26 : ಕಾರ್ಕಳ ಸಾಹಿತ್ಯ ಸಂಘ ಬೆಳ್ಳಿ ಹಬ್ಬ ಸಂಭ್ರಮ
ಕಾರ್ಕಳ : ಕಾರ್ಕಳ ಸಾಹಿತ್ಯ ಸಂಘದ ಬೆಳ್ಳಿ ಹಬ್ಬ ಸಂಭ್ರಮದ ವರುಷ-ಹರುಷ ಕಾರ್ಯಕ್ರಮ ಪ್ರೊ. ಎಂ. ರಾಮಚಂದ್ರ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಗ್ರಂಥದ್ವಯ ಲೋಕಾರ್ಪಣಾ ಕಾರ್ಯಕ್ರಮ ಫೆ. 26 ಸಂಜೆ 4.30ಕ್ಕೆ ಪ್ರಕಾಶ್ ಹೊಟೆಲ್ ನ ಸಂಭ್ರಮ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಕಳ ಸಾಹಿತ್ಯ ಸಂಘದ ಕಾರ್ಯಾಧ್ಯಕ್ಷ ಕೆ.ಪಿ. ಶೆಣೈ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಬೆಂಗಳೂರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್ ಭಟ್ ಎಂ. ರಾಮಚಂದ್ರ ಅವರಿಗೆ ನುಡಿ ನಮನ ಸಲ್ಲಿಸಲಿರುವರು. ಬೆಟ್ಟಪ್ಪಾಂಡಿ ಕಾಲೇಜಿನ ಪ್ರಾಂಶುಪಾಲ, ಸಾಹಿತ್ಯ ವಿಮರ್ಷಕ ಡಾ. ವರದರಾಜ ಚಂದ್ರಗಿರಿ ಅವರನ್ನು ಪ್ರೊ. ಎಂ. ರಾಮಚಂದ್ರ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು. "ಪತ್ರ ಪಾಥೇಯ" ಮತ್ತು "ಕದಿರು ಕಟ್ಟು" ಕೃತಿಗಳ ಪರಿಚಯವನ್ನು ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ಟ ಮಾಡಲಿದ್ದಾರೆ ಎಂದು ಕೆ.ಪಿ. ಶೆಣೈ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಕಳ ಸಾಹಿತ್ಯ ಸಂಘದ ಗೌರವಾಧ್ಯಕ್ಷ ಆರ್. ತುಕಾರಾಮ ನಾಯಕ್, ಪ್ರಧಾನ ಕಾರ್ಯದರ್ಶಿ ಬಿ. ಪದ್ಮನಾಭ ಗೌಡ, ಕೋಶಾಧಿಕಾರಿ ನಿತ್ಯಾನಂದ ಪೈ, ಸಾಹಿತ್ಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ, ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ, ಎಸ್.ಜಿ. ಪ್ರಭು ಉಪಸ್ಥಿತರಿದ್ದರು.