ಉಡುಪಿ ಎಂಜಿಎಂ ಕಾಲೇಜಿನಲ್ಲಿ ಮತ್ತೆ ಹಿಜಾಬ್ ಗೊಂದಲ: 30ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಕ್ಯಾಂಪಸ್ ಪ್ರವೇಶ ನಿರಾಕರಣೆ

ಉಡುಪಿ, ಫೆ.24: ಉಡುಪಿ ಮಹಾತ್ಮ ಗಾಂಧಿ ಕಾಲೇಜಿನಲ್ಲಿ ಮತ್ತೆ ಹಿಜಾಬ್ ಗೊಂದಲ ಉಂಟಾಗಿದ್ದು, ಇಂದು ಕಾಲೇಜಿಗೆ ಆಗಮಿಸಿದ ಹಿಜಾಬ್‌ಧಾರಿ ಸ್ನಾತಕೋತ್ತರ, ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ 30ಕ್ಕೂ ಅಧಿಕ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಆವರಣದಿಂದ ಹೊರ ಕಳುಹಿಸಿರುವು ದಾಗಿ ಆರೋಪಿಸಲಾಗಿದೆ.
ಪದವಿಯ ಆಂತರಿಕ ಪರೀಕ್ಷೆ ಮುಗಿದ ಹಿನ್ನೆಲೆಯಲ್ಲಿ ಮತ್ತು ಇತರ ಕಾಲೇಜಿನಂತೆ ಇಲ್ಲಿಯೂ ಸ್ನಾತಕೋತ್ತರ ತರಗತಿಗೆ ಪ್ರವೇಶ ಕಲ್ಪಿಸುವಂತೆ ಮನವಿ ಮಾಡುವ ನಿಟ್ಟಿನಲ್ಲಿ ಕೆಲವು ವಿದ್ಯಾರ್ಥಿನಿಯರು ಬೆಳಗ್ಗೆ ಕಾಲೇಜಿಗೆ ಆಗಮಿಸಿ ದರು. ಆದರೆ ಪ್ರಾಂಶುಪಾಲರು, ಹೈಕೋರ್ಟ್ ಆದೇಶದ ಮುಂದಿಟ್ಟುಕೊಂಡು ಎಲ್ಲ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರಗಡೆ ಕಳುಹಿಸಿದರು.
ಹಿಜಾಬ್‌ಧಾರಿ ವಿದ್ಯಾರ್ಥಿನಿಯರು ಕಾಲೇಜಿನ ಆವರಣದೊಳಗೆ ಪ್ರವೇಶಿಸ ದಂತೆ ಗೇಟು ಹಾಕಲಾಯಿತು. ಈ ಹಿನ್ನೆಲೆಯಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿನಿ ಯರು ಬುರ್ಕಾ ಹಾಕಿಕೊಂಡು ಗೇಟಿಗೆ ಎದುರು ನಿಂತು ಪ್ರವೇಶ ಕಲ್ಪಿಸುವಂತೆ ಒತ್ತಾಯಿಸಿದರು. ಕಾಲೇಜಿನಿಂದ ಯಾವುದೇ ಸ್ಪಂದನೆ ದೊರೆಯದ ಕಾರಣ ವಿದ್ಯಾರ್ಥಿನಿಯರು, ಬಳಿಕ ಮನೆಗೆ ವಾಪಾಸ್ಸಾದರು.
ಈ ಹಿನ್ನೆಲೆಯಲ್ಲಿ ಕಾಲೇಜಿನ ಆವರಣ ಹಾಗೂ ಹೊರಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಒಂದು ಕೆಎಸ್‌ಆರ್‌ಪಿ ತುಕಡಿ ಯನ್ನು ನಿಯೋಜಿಸಲಾಗಿತ್ತು. ಸ್ಥಳಕ್ಕೆ ಡಿವೈಎಸ್ಪಿ ಸುಧಾಕರ್ ನಾಯ್ಕಿ ಆಗಮಿಸಿ ಪರಿಶೀಲನೆ ನಡೆಸಿದರು.
‘ಪಿಜಿಗೂ ಅವಕಾಶ ನಿರಾಕರಣೆ’
‘ಸ್ನಾತಕೋತ್ತರ ಪದವಿ(ಪಿಜಿ) ತರಗತಿಗೆ ಹಿಜಾಬ್ ಹಾಕಿ ಯಾಕೆ ಬಿಡುತ್ತಿಲ್ಲ ಎಂದು ಕೇಳಲು ಕಾಲೇಜಿಗೆ ಬಂದಿದ್ದೇನೆ. ಆದರೆ ಪ್ರಾಂಶುಪಾಲರು ಇಲ್ಲ ಎಂದು ಹೇಳಿ ನನ್ನನ್ನು ಹೊರಗಡೆ ಕಳುಹಿಸಿದರು. ಪ್ರಾಂಶುಪಾಲರು ಬಂದ ನಂತರ ಗೇಟ್ ಬಂದ್ ಮಾಡಿದರು. ನಮ್ಮನ್ನು ಒಳಗಡೆ ಬಿಡುತ್ತಿಲ್ಲ. ಪ್ರಾಂಶುಪಾಲರು ಗೇಟ್‌ವರೆಗೆ ಬಂದು ಹಿಜಾಬ್ ತೆಗೆದು ಒಳಗೆ ಬರುವುದಾದರೆ ಬನ್ನಿ, ಹೈಕೋರ್ಟ್ ಆದೇಶ ಇದೆ ಎಂದು ಹೇಳಿ ಹೋದರು’ ಎಂದು ಪಿಜಿ ವಿದ್ಯಾರ್ಥಿನಿಯೊಬ್ಬರು ತಿಳಿಸಿದರು.
‘ಹೈಕೋರ್ಟ್ ಮಧ್ಯಂತರ ಆದೇಶವು ಪದವಿ ಪೂರ್ವ ಕಾಲೇಜಿಗೆ ಮಾತ್ರ ಅನ್ವಯವಾಗುತ್ತದೆಯೇ ಹೊರತು ಪಿಜಿಗೆ ಅಲ್ಲ. ಮಣಿಪಾಲ ಎಂಐಟಿ, ಉಡುಪಿಯ ಪಿಜಿ ಕಾಲೇಜಿನ ಎಲ್ಲರೂ ಹಿಜಾಬ್ ಹಾಕಿ ಕೊಂಡೇ ತರಗತಿಗೆ ಹೋಗುತ್ತಿದ್ದಾರೆ. ಇಲ್ಲಿ ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಅವರು ಪ್ರಶ್ನಿಸಿ ದರು. ‘ನಮ್ಮ ಕಾಲೇಜಿನ ಸಹಪಾಠಿಗಳು ಹಿಜಾಬ್‌ಗೆ ವಿರೋಧವೂ ಇಲ್ಲ ಪರವೂ ಇಲ್ಲ. ಅವರು ಅವರಷ್ಟಗೆ ಕಲಿಯುತ್ತಿದ್ದಾರೆ. ನಾವು ಯಾರು ಹಿಜಾಬ್ ತೆಗೆದು ತರಗತಿಗೆ ಹೋಗಿಲ್ಲ ಎಂದರು.
‘ಪರೀಕ್ಷೆಯಿಂದ ವಂಚಿತರಾದೇವು’
‘ಫೆ.8ರಂದು ಕಾಲೇಜಿನ ಕೇಸರಿ ಶಾಲು ವಿವಾದ ನಡೆದ ಬಳಿಕ ನಮ್ಮನ್ನು ತರಗತಿ ಬಿಡುತ್ತಿಲ್ಲ. ಕಾಲೇಜಿಗೆ ಬಂದರೂ ಆವರಣದೊಳಗಡೆ ಬಿಡುತ್ತಿಲ್ಲ. ಇವರಿಗೆ ನಮ್ಮನ್ನು ಆವರಣದೊಳಗೆ ಬಿಡಬಹುದಲ್ಲ? ನಮಗೆ ಲೈಬ್ರರಿಗೆ ಹೋಗಲು ಇರುತ್ತದೆ ಮತ್ತು ಅಸ್ಸೈನ್‌ಮೆಂಟ್ ಸಲ್ಲಿಸಲು ಕೂಡ ಇದೆ’ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು.
‘ಕಾಲೇಜಿನವರು ತಪ್ಪು ಮಾಡುತ್ತಿದ್ದಾರೆ. ಅಭಿವೃದ್ಧಿ ಸಮಿತಿ ಅಧೀನದಲ್ಲಿರುವ ಕಾಲೇಜಿಗೆ ಮಾತ್ರ ಈ ಆದೇಶ ಅನ್ವಯವಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೆ ನಮ್ಮ ಕಾಲೇಜು ಅಭಿವೃದ್ಧಿ ಸಮಿತಿ ಅಧೀನದಲ್ಲಿ ಇಲ್ಲ. ಅವರು ಬೇಕಂತಲೇ ನಮ್ಮನ್ನು ಹೊರಗಡೆ ಹಾಕುತ್ತಿದ್ದಾರೆ. ಕೋರ್ಟ್ ಆದೇಶ ಕೂಡ ನಮಗೆ ತೋರಿಸುವುದಿಲ್ಲ ಎಂದು ಅವರು ದೂರಿದರು.
‘ಹಿಜಾಬ್ ಧರಿಸಿ ಬರಲು ಅವಕಾಶ ಇಲ್ಲ ಹೇಳಿದಕ್ಕೆ ನಾವು ಪರೀಕ್ಷೆಗೆ ಹೋಗಿಲ್ಲ. ಕಳೆದ ಮೂರು ದಿನಗಳಲ್ಲಿ ಒಟ್ಟು ಆರು ಇಂಟರ್ನಲ್ ಪರೀಕ್ಷೆ ನಡೆದಿದೆ. ಈ ಪರೀಕ್ಷೆ ಬರೆಯಲು ನಮಗೆ ಅವಕಾಶವೇ ಕಲ್ಪಿಸಿಲ್ಲ. ಇದರಿಂದ ನಾವೆಲ್ಲ ವಂಚಿತರಾಗಿದ್ದೇವೆ. ಇದೀಗ ಮತ್ತೆ ಕಾಲೇಜು ತರಗತಿ ಪುನಾರಂಭ ವಾಗಿದೆ. ಅದಕ್ಕಾಗಿ ಕಾಲೇಜಿಗೆ ಬಂದಿದ್ದೇವೆ. ಆದರೆ ನಮ್ಮನ್ನು ತೆಗೆದುಕೊಳ್ಳುತ್ತಿಲ್ಲ’ ಎಂದು ಪದವಿ ಕಾಲೇಜಿನ ವಿದ್ಯಾರ್ಥಿನಿ ತಿಳಿಸಿದರು.
‘ಆದಷ್ಟು ಬೇಗ ಹೈಕೋರ್ಟ್ ಅಂತಿಮ ತೀರ್ಪು ನೀಡಿ ಹಿಜಾಬ್‌ನೊಂದಿಗೆ ಶಿಕ್ಷಣ ಪಡೆಯಲು ನಮಗೆ ಅವಕಾಶ ನೀಡಲಿ. ಕಾಲೇಜಿನವರು ನಮ್ಮನ್ನು ತರಗತಿಗೆ ಸೇರಿಸಿಕೊಳ್ಳಬಹುದು ಎಂಬ ನಿರೀಕ್ಷೆ ಬಂದಿದ್ದೇವೆ. ನಾವು ಮಾನಸಿಕ ವಾಗಿ ಜರ್ಜರಿತರಾಗಿದ್ದೇವೆ ಮತ್ತು ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದೇವೆ. ಮಾಧ್ಯಮಗಳು ಕೂಡ ನಮ್ಮನ್ನು ತಪ್ಪಾಗಿ ಬಿಂಬಿಸುತ್ತಿದೆ’
-ವಿದ್ಯಾರ್ಥಿನಿಯರು, ಎಂಜಿಎಂ ಕಾಲೇಜು







.jpeg)



