17 ವರ್ಷಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ 4,850 ಪ್ರಕರಣಗಳು ದಾಖಲು; ರೂ. 98,369 ಕೋಟಿ ಮುಟ್ಟುಗೋಲು

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯನ್ವಯ ತನಿಖೆಗಾಗಿ ಕಳೆದ 17 ವರ್ಷಗಳಲ್ಲಿ 4,850 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದೆ ಹಾಗೂ ಅಕ್ರಮವಾಗಿ ವರ್ಗಾವಣೆಯಾದ ರೂ. 98,368 ಕೋಟಿ ಮೊತ್ತವನ್ನು ಗುರುತಿಸಿ ಸಂಬಂಧಿತ ಕಾನೂನಿನಂತೆ ಮುಟ್ಟುಗೋಲು ಹಾಕಲಾಗಿದೆ ಎಂದು ಕೇಂದ್ರ ಸರಕಾರ ಗುರುವಾರ ಸುಪ್ರೀಂ ಕೋರ್ಟಿಗೆ ಮಾಹಿತಿ ನೀಡಿದೆ.
ಈ ಕಾನೂನಿನ ಕೆಲವೊಂದು ನಿಬಂಧನೆಗಳ ವ್ಯಾಖ್ಯಾನದ ಕುರಿತಂತೆ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿರುವ ಸಂದರ್ಭ ಕೇಂದ್ರ ಮೇಳಿನ ಮಾಹಿತಿ ಒದಗಿಸಿದೆ.
ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಮ್ಮ ವಾದ ಮಂಡಿಸುತ್ತಾ, ಉಗ್ರವಾದ ಮತ್ತು ನಕ್ಸಲ್ ಚಟುವಟಿಕೆಗೆ ಹಣ ಪೂರೈಕೆ ಕುರಿತಾದ 57 ಪ್ರಕರಣಗಳಲ್ಲಿ ರೂ. 1,249 ಕೋಟಿ ಅಕ್ರಮ ವರ್ಗಾವಣೆಯಾಗಿದೆ ಎಂದು ಕಂಡುಕೊಳ್ಳಲಾಗಿದೆ ಹಾಗೂ ರೂ. 982 ಕೋಟಿ ಮೌಲ್ಯದ 256 ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗಿದೆ. ಈ ಕಾಯಿದೆಯಡಿ ಇಬ್ಬರು ಉಗ್ರರನ್ನು ದೋಷಿಗಳೆಂದು ನ್ಯಾಯಾಲಯ ಘೋಷಿಸಿದೆ ಎಂದು ಸರಕಾರ ತಿಳಿಸಿದೆ.
ಕಳೆದ 17 ವರ್ಷಗಳಲ್ಲಿ 4,650 ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ 2,883 ಶೋಧ ಕಾರ್ಯಾಚರಣೆಗಳನ್ನೂ ನಡೆಸಲಾಗಿದೆ ಎಂದು ನ್ಯಾಯಾಲಯಕ್ಕೆ ಸರಕಾರ ತಿಳಿಸಿದೆ.







