ಬೆಂಗಳೂರು: ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಸಚಿವಾಲಯದ ನೌಕರರ ಸಂಘ ಪ್ರತಿಭಟನೆ

ನೌಕರರ ಸಂಘದಿಂದ ಪ್ರತಿಭಟನೆ
ಬೆಂಗಳೂರು, ಫೆ.24: ‘ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು, ನಿವೃತ್ತ ಅಧಿಕಾರಿ, ನೌಕರರನ್ನು ಗುತ್ತಿಗೆ ಆಧಾರದ ಮೇಲೆ ಪುನರ್ ನೇಮಕ ಕೈಬಿಟ್ಟು, ನಿರುದ್ಯೋಗಿಗಳಿಗೆ ಅವಕಾಶ ಕಲ್ಪಿಸಬೇಕು' ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಗುರುವಾರ ಸಚಿವಾಲಯ ನೌಕರರ ಸಂಘವು ವಿಧಾನಸೌಧ-ವಿಕಾಸಸೌಧ ಮಧ್ಯದಲ್ಲಿರುವ ಗಾಂಧಿ ಪ್ರತಿಮೆ ಬಳಿ ಮೌನ ಪ್ರತಿಭಟನೆ ನಡೆಸಿತು.
ಸಚಿವಾಲಯದಲ್ಲಿ ಕಿರಿಯ ಸಹಾಯಕ ಹುದ್ದೆಗಳ ಅಗತ್ಯ ಇರುವ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಪೂರಕ ವರದಿ ನೀಡಿದೆ. ಆದರೂ, ಅದನ್ನು ಪರಿಗಣಿಸದೆ ಸಚಿವ ಸಂಪುಟ ಉಪ ಸಮಿತಿಯು ಅವೈಜ್ಞಾನಿಕವಾಗಿ 542 ಕಿರಿಯ ಸಹಾಯಕ ಹುದ್ದೆಗಳನ್ನು ರದ್ದುಗೊಳಿಸಲು ಹೊರಟಿರುವುದನ್ನು ನಮ್ಮ ಸಂಘವು ವಿರೋಧಿಸುತ್ತದೆ ಎಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಹೇಳಿದರು.
ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಬೇಕು. ಅವಧಿ ಮೀರಿದ ನಿಯೋಜನೆ, ಅನ್ಯ ಕಾರ್ಯ ನಿಮಿತ್ತ ಕಾರ್ಯನಿರ್ವಹಿಸುತ್ತಿರುವವರನ್ನು ಮಾತೃ ಇಲಾಖೆಗೆ ಹಿಂದಿರುಗಿಸಬೇಕು, ರಾಜ್ಯ ಸರಕಾರಿ ಸೇವೆ ಸಲ್ಲಿಸಿ ನಿವೃತ್ತಿಯಾದ ಅಧಿಕಾರಿ, ನೌಕರರನ್ನು ಗುತ್ತಿಗೆ ಆಧಾರದ ಮೇಲೆ ಸಚಿವಾಲಯದಲ್ಲಿ ಪುನರ್ ನೇಮಕ ಮಾಡಿಕೊಳ್ಳುತ್ತಿರುವುದನ್ನು ಕೈ ಬಿಡಬೇಕು ಎಂದು ಅವರು ಒತ್ತಾಯಿಸಿದರು.
ಸಚಿವಾಲಯದ ಇಲಾಖೆಗಳಲ್ಲಿ ಗ್ರೂಪ್-ಡಿ, ದತ್ತಾಂಶ ನಮೂದಕರನ್ನೊಳಗೊಂಡಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಭರ್ತಿ ಮಾಡಿದ ಅಧಿಕಾರಿ, ನೌಕರರನ್ನು ಹೊರತುಪಡಿಸಿ ಕ್ಷೇತ್ರ ಇಲಾಖೆಗಳಿಂದ ಹೊರಗುತ್ತಿಗೆ ಮುಖಾಂತರ ನೇಮಕ ಮಾಡಿಕೊಂಡು ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಹಿಂದಿರುಗಿಸಬೇಕು ಎಂದು ಅವರು ಆಗ್ರಹಿಸಿದರು.
ಆಡಳಿತ ಸುಧಾರಣೆ ನೆಪದಲ್ಲಿ ಸಚಿವಾಲಯದ ಯಾವುದೇ ಇಲಾಖೆ, ಹುದ್ದೆಗಳ ಕಡಿತ, ಮರುಹೊಂದಾಣಿಕೆ ಮಾಡುವ ಪ್ರಸ್ತಾವನೆಯನ್ನು ಕೈಬಿಡಬೇಕು. ಸಚಿವರ ಆಪ್ತ ಶಾಖೆಗಳಿಗೆ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರನ್ನು ಮಾತ್ರ ಕಡ್ಡಾಯವಾಗಿ ನೇಮಿಸಿಕೊಳ್ಳಬೇಕು ಎಂದು ಗುರುಸ್ವಾಮಿ ಒತ್ತಾಯಿಸಿದರು.
ರಾಜ್ಯ ಸರಕಾರವು ಸಚಿವಾಲಯದ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಸಚಿವಾಲಯ ಬಂದ್ ಮಾಡಿ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಪ್ರತಿಭಟನೆಯಲ್ಲಿ ಸಚಿವಾಲಯ ನೌಕರರ ಸಂಘದ ಖಜಾಂಚಿ ಬಿ.ಆರ್. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಎ.ಎಸ್.ಹರ್ಷ, ಜಂಟಿ ಕಾರ್ಯದರ್ಶಿಗಳಾದ ಶಾಂತಾರಾಮ, ಬಿ.ಎ.ಸತೀಶ್ ಕುಮಾರ್, ಸಾಂಸ್ಕøತಿಕ ಕಾರ್ಯದರ್ಶಿ ಪಿ.ಆರ್.ಮಂಜುಳಾ, ಸಂಘಟನಾ ಕಾರ್ಯದರ್ಶಿಗಳಾದ ಮಾರುತಿ, ಜಗದೀಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.






.jpg)
.jpg)
.jpg)
.jpg)

