ಉಕ್ರೇನ್ನಲ್ಲಿ ಸಿಲುಕಿದ ಮಂಗಳೂರಿನ ಇಬ್ಬರು ವಿದ್ಯಾರ್ಥಿಗಳು

ಸಾಂದರ್ಭಿಕ ಚಿತ್ರ (PTI)
ಮಂಗಳೂರು, ಫೆ.24: ಯುದ್ಧದ ಭೀತಿಗೊಳಗಾಗಿರುವ ಉಕ್ರೇನ್ನಲ್ಲಿ ನಗರದ ಇಬ್ಬರು ವಿದ್ಯಾರ್ಥಿಗಳು ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ದ.ಕ.ಜಿಲ್ಲಾಡಳಿತದ ಮಾಹಿತಿಯ ಪ್ರಕಾರ ಈ ಇಬ್ಬರು ಕೂಡ ಸುರಕ್ಷಿತರಾಗಿದ್ದಾರೆ.
ನಗರದ ಪಡೀಲ್ ನಿವಾಸಿ ಮರ್ವಿನ್ ಡಿಸೋಜರ ಪುತ್ರ ಕ್ಲೇಟನ್ ಡಿಸೋಜ ಮತ್ತು ದೇರಬೈಲ್ ನ ಸಂಧ್ಯಾ ಎಂಬವರ ಪುತ್ರಿ ಅನೈನಾ ಎಂಬ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಡೀಲ್ನ ಕ್ಲೇಟನ್ ಡಿಸೋಜ ಎಂಬಿಬಿಎಸ್ ಪ್ರಥಮ ವರ್ಷದ ಮತ್ತು ದೇರೇಬೈಲ್ನ್ ಅನೈನಾ ಎಂಬಿಬಿಎಸ್ ಮೂರನೇ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ. ಫೆ.26ರಂದು ಈ ವಿದ್ಯಾರ್ಥಿಗಳು ಮಂಗಳೂರಿಗೆ ಆಗಮಿಸುವುದರಲ್ಲಿದ್ದರು. ಆದರೆ ವಿಮಾನ ಹಾರಾಟಕ್ಕೆ ನಿರ್ಬಂಧ ವಿಧಿಸಿರುವ ಹಿನ್ನಲೆಯಲ್ಲಿ ಉಕ್ರೇನ್ನಲ್ಲೇ ಉಳಿಯುವಂತಾಗಿದೆ ಎಂದು ತಿಳಿದು ಬಂದಿದೆ.
ಕ್ಲೇಟನ್ ಡಿಸೋಜ ಸುರಕ್ಷಿತವಾಗಿದ್ದಾನೆ. ಯಾವುದೇ ಅಪಾಯವಿಲ್ಲ. ಉದ್ವಿಗ್ನ ಸ್ಥಿತಿಯ ಬಳಿಕ ನಾವು ಆತನ ಜೊತೆ ಸದಾ ಸಂಪರ್ಕದಲ್ಲಿದ್ದೇವೆ. ಭಾರತದ ರಾಯಭಾರಿ ಕಚೇರಿಯೂ ಸ್ಪಂದಿಸುತ್ತಲಿದೆ. ಮಗನನ್ನು ಕಾಣಬೇಕು, ಆತ ಸುರಕ್ಷಿತವಾಗಿ ಊರಿಗೆ ಮರಳಬೇಕು. ವಿದ್ಯಾಭ್ಯಾಸ ಮುಂದುವರಿಸಬೇಕು ಎಂಬ ಆಸೆ ಇದೆ. ಅದು ಈಡೇರಲಿ ಎಂದು ಮರ್ವಿನ್ ಡಿಸೋಜ ಪ್ರತಿಕ್ರಿಯಿಸಿದ್ದಾರೆ.
ಉಕ್ರೇನ್ನಲ್ಲಿ ಸಿಲುಕಿದವರಿಗೆ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಅಗತ್ಯ ನೆರವು ಬೇಕಿದ್ದರೆ ದ.ಕ.ಜಿಲ್ಲಾಡಳಿತಕ್ಕೆ (1077) ಅಥವಾ ಸ್ಥಳೀಯ ತಹಶೀಲ್ದಾರರ ಕಚೇರಿಗೆ ಮಾಹಿತಿ ನೀಡಬಹುದು ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮನವಿ ಮಾಡಿದ್ದಾರೆ.
ಉಕ್ರೇನ್ನ ದೇಶದ ಪ್ರಜೆಗಳು ಮಂಗಳೂರಿನಲ್ಲಿ ನೆಲೆಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಮಂಗಳೂರಿನಲ್ಲಿರುವ ಉಕ್ರೇನ್ ದೇಶದ ಪ್ರಜೆಗಳಿಗೆ ಅಗತ್ಯ ನೆರವು ಬೇಕಿದ್ದರೆ ಆಯಾ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಮಿಷನರ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ರಶ್ಯಾ ಆಕ್ರಮಣದ ವಿರುದ್ಧ ದೇಶ ರಕ್ಷಿಸಲು ನಾಗರಿಕರಿಗೆ ಶಸ್ತ್ರಾಸ್ತ್ರ ನೀಡಲು ಮುಂದಾದ ಉಕ್ರೇನ್ ಅಧ್ಯಕ್ಷ