ಉಕ್ರೇನ್ ಮೇಲೆ ರಶ್ಯಾ ಏಕೆ ದಾಳಿ ನಡೆಸಿದೆ?: ಇಲ್ಲಿವೆ ಕೆಲವು ಮಹತ್ವಪೂರ್ಣ ಮಾಹಿತಿ

ಮಾಸ್ಕೋ: ರಶ್ಯಾ ತಾನು ಹೇಳಿದಂತೆ ಕೊನೆಗೂ ಉಕ್ರೇನ್ ಮೇಲೆ ದಾಳಿ ನಡೆಸಿದೆ. ಪೂರ್ವ ಯುರೋಪ್‍ನಲ್ಲಿ ನೇಟೋ ವಿಸ್ತರಣೆಗೆ ಅಂತ್ಯ ಹಾಡಬೇಕೆಂಬ ರಶ್ಯಾದ ಬೇಡಿಕೆ ಹಿನ್ನೆಲೆಯಲ್ಲಿ ಇದು ಯುರೋಪ್‍ನಲ್ಲಿ ಯುದ್ಧದ ಆರಂಭಕ್ಕೂ ಕಾರಣವಾಗಬಹುದು ಮತ್ತು ಅದು ಏಶ್ಯಾದ ಮೇಲೂ ಭಾರೀ ಪರಿಣಾಮಕ್ಕೆ ಕಾರಣವಾಗಬಹುದು ಎಂದು ವರದಿಯಾಗಿದೆ.
ಈ ಸಂಘರ್ಷದ ಹಿನ್ನೆಲೆಯೇನು?
►ಮಾಜಿ ಸೋವಿಯತ್ ಗಣರಾಜ್ಯವಾಗಿದ್ದ ಉಕ್ರೇನ್ ಮತ್ತು ರಶ್ಯಾ ನಡುವೆ ಬಹಳ ಹಿಂದಿನಿಂದಲೂ ಉದ್ವಿಗ್ನತೆ ನೆಲೆಯೂರಿತ್ತು. ಆದರೆ 2021ರ ಆರಂಭದಲ್ಲಿ ಇದು ಬಿಗಡಾಯಿಸಿತ್ತು. ನೇಟೋ ಸೇರಲು ಉಕ್ರೇನ್‍ಗೆ ಅವಕಾಶ ನೀಡಬೇಕೆಂದು ಕಳೆದ ವರ್ಷದ ಜನವರಿಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡೈಮೈರ್ ಝೆಲೆನ್‍ಸ್ಕಿ ಅವರು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರಿಗೆ ಮನವಿ ಮಾಡಿದ್ದರು.
►ಇದು ರಶ್ಯಾದ ಆಕ್ರೋಶಕ್ಕೆ ಕಾರಣವಾಗಿ ಅದು ಉಕ್ರೇನ್ ಗಡಿ ಸಮೀಪ ತನ್ನ ಸೇನೆಯನ್ನು 'ತರಬೇತಿ ಕವಾಯತು'ಗಳಿಗಾಗಿ ಕಳುಹಿಸಲಾರಂಭಿಸಿತ್ತಲ್ಲದೆ ಡಿಸೆಂಬರ್ ಒಳಗಾಗಿ ಸೇನೆಯ ಜಮಾವಣೆ ಏರಿಕೆಯಾಗಿತ್ತು. ಉಕ್ರೇನ್ ಅನ್ನು ರಶ್ಯಾ ಆಕ್ರಮಿಸಿದರೆ ಕಠಿಣ ನಿರ್ಬಂಧಗಳ ಎಚ್ಚರಿಕೆಯನ್ನೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ನೀಡಿದ್ದರು.
►ಪೂರ್ವ ಯುರೋಪ್ ಮತ್ತು ಉಕ್ರೇನ್‍ನಲ್ಲಿ ನೇಟೋ ಯಾವುದೇ ಮಿಲಿಟರಿ ಚಟುವಟಿಕೆಯನ್ನು ನಡೆಸುವುದಿಲ್ಲವೆಂಬ ಕಾನೂನಾತ್ಮಕ ಖಾತರಿಯನ್ನು ಪೂರ್ವ ಯುರೋಪ್ ದೇಶಗಳು ನೀಡಬೇಕೆಂದು ರಶ್ಯಾ ಬೇಡಿಕೆಯಿಟ್ಟಿದೆ. ಉಕ್ರೇನ್ ದೇಶವು ಪಾಶ್ಚಿಮಾತ್ಯ ರಾಷ್ಟ್ರಗಳ ಕೈಗೊಂಬೆಯಾಗಿದೆ ಹಾಗೂ ಯಾವತ್ತೂ ಸರಿಯಾದ ಒಂದು ದೇಶವಾಗಿರಲಿಲ್ಲ ಎಂದು ಪುಟಿನ್ ಹೇಳಿಕೊಂಡಿದ್ದಾರೆ.
►ಉಕ್ರೇನ್ ಮತ್ತು ರಶ್ಯಾ ನಡುವೆ ಉದ್ವಿಗ್ನತೆ ಇದು ಮೊದಲ ಬಾರಿಯೇನಲ್ಲ. 2014ರಲ್ಲಿ ರಶ್ಯಾ ಆ ದೇಶದ ಮೇಲೆ ಆಕ್ರಮಣ ನಡೆಸಿತ್ತಲ್ಲದೆ ಪುಟಿನ್ ಬೆಂಬಲಿತ ಬಂಡುಕೋರರು ಉಕ್ರೇನ್‍ನ ಪೂರ್ವ ಭಾಗದ ಬಹುಪಾಲನ್ನು ಆಕ್ರಮಿಸಿಕೊಂಡಿದ್ದರಲ್ಲದೆ ಅಂದಿನಿಂದ ಉಕ್ರೇನ್ ಸೇನೆ ಜತೆ ಕಾದಾಟ ನಡೆಸುತ್ತಲೇ ಬಂದಿದ್ದಾರೆ. ಆ ಸಂದರ್ಭ ಕ್ರಿಮಿಯಾವನ್ನು ರಶ್ಯಾ ಆಕ್ರಮಿಸಿತ್ತು.
►ಮಾಜಿ ಸೋವಿಯತ್ ಗಣರಾಜ್ಯವಾಗಿರುವ ಉಕ್ರೇನ್ ವಾಸ್ತವವಾಗಿ ರಶ್ಯಾ ಜತೆ ನಿಕಟ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಹೊಂದಿದೆ ಹಾಗೂ ಅಲ್ಲಿ ಹೆಚ್ಚಿನ ಜನರು ರಶ್ಯನ್ ಭಾಷೆಯನ್ನೇ ಮಾತನಾಡುತ್ತಾರೆ. ಆದರೆ ರಶ್ಯಾ ಉಕ್ರೇನ್ ಮೇಲೆ 2014ರಲ್ಲಿ ದಾಳಿ ನಡೆಸಿದ ನಂತರ ಸಂಬಂಧಗಳು ಹದಗೆಟ್ಟಿವೆ.
►ಉಕ್ರೇನ್‍ನ ರಶ್ಯಾ ಪರ ಅಧ್ಯಕ್ಷರನ್ನು 2014ರಲ್ಲಿ ಅಧಿಕಾರದಿಂದ ಕೆಳಗಿಳಿಸಿದ ನಂತರ ರಶ್ಯಾ ಉಕ್ರೇನ್ ಮೆಲೆ ದಾಳಿ ನಡೆಸಿತ್ತು. ಪೂರ್ವ ಉಕ್ರೇನ್‍ನಲ್ಲಿನ ಯುದ್ಧ ಇಲ್ಲಿಯ ತನಕ 14,000 ಕ್ಕೂ ಅಧಿಕ ಜೀವಗಳನ್ನು ಬಲಿತೆಗೆದುಕೊಂಡಿದೆ.
►ಪೂರ್ವ ಉಕ್ರೇನ್‍ನಲ್ಲಿನ ಸಂಘರ್ಷವನ್ನು ನಿಲ್ಲಿಸಲು ರಶ್ಯಾ ಮತ್ತು ಉಕ್ರೇನ್ ಮಿನ್ಸ್ಕ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ ಸಂಘರ್ಷ ಮುಂದುವರಿದಾಗ ತಾನು ಶಾಂತಿಪಾಲಕರನ್ನು ಕಳುಹಿಸುತ್ತಿರುವುದಾಗಿ ರಶ್ಯಾ ಹೇಳಿತ್ತು. ಆದರೆ ಉಕ್ರೇನ್ ಆಕ್ರಮಿಸಲು ರಶ್ಯಾ ಮಾಡಿದ ತಂತ್ರವಿದೆಂದೇ ಆರೋಪಿಸಲಾಗಿದೆ.
►ರಶ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಯುರೋಪಿಯನ್ ಯೂನಿಯನ್ ಅನ್ನೂ ಬಾಧಿಸಲಿದೆ. ಇದೇ ಕಾರಣಕ್ಕೆ ನೇಟೋ ಗೆ ಸಹಿ ಹಾಕಿರುವ ಹೆಚ್ಚಿನ ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ಅಮೆರಿಕಾ ಜತೆಗೂಡಿ ರಶ್ಯಾ ಮೇಲೆ ನಿರ್ಬಂಧಗಳನ್ನು ಘೋಷಿಸಿವೆ.
►ಕೆಲ ವಾರಗಳ ಹಿಂದೆಯಷ್ಟೇ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರಾನ್ ಅವರು ಮಾಸ್ಕೋಗೆ ತೆರಳಿ ಉದ್ವಿಗ್ನತೆ ಕಡಿಮೆ ಮಾಡುವ ಉದ್ದೇಶದಿಂದ ಪುಟಿನ್ ಅವರನ್ನು ಭೇಟಿಯಾಗಿದ್ದರು.
►ಪ್ರಸಕ್ತ ರಶ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರಕ್ಕಾಗಿ ಭಾರತ ಆಗ್ರಹಿಸಿದೆ.







