ಕೆಎಸ್‌ಸಿಎ ಲೀಗ್: ನೇತಾಜಿ ಕ್ಲಬ್ಬಿಗೆ ಜಯ; ಅಶೀಷ್ ನಾಯಕ್ (12ಕ್ಕೆ 8) ಅಮೋಘ ಬೌಲಿಂಗ್

ಮಂಗಳೂರು, ಫೆ.24: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಇಲ್ಲಿನ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 50 ಓವರುಗಳ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಪರ್ಕಳದ ನೇತಾಜಿ ಸ್ಪೋರ್ಟ್ಸ್ ಕ್ಲಬ್ ತಂಡ, ಮಂಗಳೂರಿನ ಚಾಲೆಂಜರ್ಸ್ ಫ್ರೆಂಡ್ಸ್ ಸರ್ಕಲ್ ತಂಡವನ್ನು 10 ವಿಕೆಟ್‌ಗಳ ಅಂತರದಿಂದ ಪರಾಜಯಗೊಳಿಸಿತು.
ನೇತಾಜಿ ತಂಡದ ಸ್ಪಿನ್ನರ್ ಅಶೀಷ್ ನಾಯಕ್ ಅವರ ಅಮೋಘ ಬೌಲಿಂಗ್ ಪ್ರದರ್ಶನ ಈ ಜಯದಲ್ಲಿ ಪ್ರಧಾನಪಾತ್ರ ವಹಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಛಾಲೆಂಜರ್ಸ್ ತಂಡ, ಆಶೀಷ್ ನಾಯಕ್ ಅವರ ಆಫ್ ಸ್ಪಿನ್ ದಾಳಿಗೆ ಸಿಲುಕಿ 17 ಓವರುಗಳಲ್ಲಿ 56 ರನ್‌ಗಳಿಗೆ ಆಲೌಟಾಯಿತು.
ಎಂಜಿಎಂ ಕಾಲೇಜಿನ ವಿದ್ಯಾರ್ಥಿಯಾಗಿರುವ ಆಶೀಷ್ ಏಳು ಓವರುಗಳ ಬೌಲಿಂಗಿನಲ್ಲಿ ಕೇವಲ 12 ರನ್‌ಗಳನ್ನು ನೀಡಿ ಹ್ಯಾಟ್ರಿಕ್ ಒಳಗೊಂಡಂತೆ ಎಂಟು ವಿಕೆಟ್‌ಗಳನ್ನು ಪಡೆದರು. ಬಳಿಕ ನೇತಾಜಿ ತಂಡದ ಆರಂಭಿಕ ಆಟಗಾರರಾದ ಋಷಬ್ ನಾಯಕ್ (25) ಹಾಗೂ ನಿತಿನ್ ಉಪಾಧ್ಯ (28) ಅವರು ಅಜೇಯರಾಗುಳಿದು ತಂಡಕ್ಕೆ 10 ವಿಕೆಟ್‌ಗಳ ಜಯ ದಾಖಲಿಸಿದರು.
ಪರ್ಕಳ ನೇತಾಜಿ ಕ್ಲಬ್‌ಗೆ ಇದು ಸತತ ಎರಡನೇ ಜಯ. ಮೊದಲ ಪಂದ್ಯದಲ್ಲಿ ಅದು ಬಂಟ್ವಾಳ ಕ್ರಿಕೆಟರ್ಸ್ ತಂಡವನ್ನು ಸೋಲಿಸಿತ್ತು.





