ಉಕ್ರೇನ್ ನಲ್ಲಿ ಸಿಲುಕಿದ ಚಿಕ್ಕಮಗಳೂರಿನ 6 ಮಂದಿ ವಿದ್ಯಾರ್ಥಿಗಳು: ಸುರಕ್ಷಿತವಾಗಿ ಕರೆ ತರಲು ಪೋಷಕರ ಮನವಿ

ಸಾಂದರ್ಭಿಕ ಚಿತ್ರ (Photo- PTI)
ಚಿಕ್ಕಮಗಳೂರು, ಫೆ.24: ಉಕ್ರೇನ್ - ರಷ್ಯಾ ಮಧ್ಯೆ ಯುದ್ಧ ನಡೆಯುತ್ತಿದ್ದು, ಉಕ್ರೇನ್ ನಲ್ಲಿ 6 ಮಂದಿ ಜಿಲ್ಲೆಯ ವಿದ್ಯಾರ್ಥಿಗಳು ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಹೊಸಳ್ಳಿಯ ಇಂದ್ರೇಶ್ ಅವರ ಪುತ್ರ ಪ್ರದ್ವಿನ್ ಉಕ್ರೇನ್ನ ಖಾರ್ಕಿವ್ ನಗರದ ಖಾರ್ಕಿವ್ ಇಂಟರ್ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರದ್ವಿನ್ನನ್ನು ಸುರಕ್ಷಿತವಾಗಿ ಕರೆತರುವಂತೆ ಪೋಷಕರು ಸರಕಾರಕ್ಕೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ.
ಹಾಗೆಯೇ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ಪಿಳ್ಳೇನಹಳ್ಳಿ ಸಮೀಪದ ಉಡಿಗರಹಳ್ಳಿಯ ಎಚ್.ಕೆ.ಮನೋಜ್ ಎಂಬವರು ಉಕ್ರೇನ್ನಲ್ಲಿ ಸಿಲುಕಿದ್ದಾರೆ. ಇವರು ಕಳೆದ ಮೂರುವರೆ ತಿಂಗಳ ಹಿಂದಷ್ಟೇ ಉಕ್ರೇನ್ ದೇಶಕ್ಕೆ ತೆರಳಿದ್ದು, ಅಲ್ಲಿ ಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳೂ ಸೇರಿದಂತೆ ಜಿಲ್ಲೆಯ 6 ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದು, ಕೆಲವರು ಸಂಪರ್ಕಕ್ಕೆ ಸಿಕ್ಕಿದ್ದರೇ ಕೆಲವರು ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಅವರ ಸಂಪರ್ಕಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಪ್ರಯತ್ನಿಸುತ್ತಿದ್ದು, ತಮ್ಮವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಂತೆ ವಿದ್ಯಾರ್ಥಿಗಳ ಪೋಷಕರು ಸರಕಾರಕ್ಕೆ ಮನವಿ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ.







