'ಮಲಯಾಳಂ ಬಲ್ಲವರಿಗೆ ಮಾತ್ರ ಸರಕಾರಿ ಉದ್ಯೋಗ ಎಂಬ ಕೇರಳ ಸಿಎಂ ಹೇಳಿಕೆಯಿಂದ ಆತಂಕ'
ಕರ್ನಾಟಕ ಗಡಿಪ್ರದೇಶ ಅಭಿವೃಧ್ಧಿ ಪ್ರಾಧಿಕಾರ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
ಮಂಗಳೂರು, ಫೆ.24:ಮಲಯಾಳಂ ಬಲ್ಲವರಿಗೆ ಮಾತ್ರ ಸರಕಾರಿ ಉದ್ಯೋಗ ನೀಡಲಾಗುವುದು ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಸೋಮವಾರ ನಡೆದ ಮಲೆಯಾಳ ಮಿಷನ್ ಮಾತೃಭಾಷಾ ದಿನಾಚರಣೆಯ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆಯ ಬಗ್ಗೆ ಕರ್ನಾಟಕ ಗಡಿಪ್ರದೇಶ ಅಭಿವೃಧ್ಧಿ ಪ್ರಾಧಿಕಾರ ಆತಂಕ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ರ ಹೇಳಿಕೆಯಿಂದ ಕಾಸರಗೋಡು ಮತ್ತು ಸುತ್ತ ಮುತ್ತಲಿರುವ ಅಲ್ಪಸಂಖ್ಯಾತ ಕನ್ನಡಿಗರಲ್ಲಿ ಆತಂಕ ಉಂಟು ಮಾಡಿದೆ. ಈವರೆಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡು ಪ್ರದೇಶದಲ್ಲಿ ಮಲೆಯಾಳಂ ಭಾಷೆಯಿಂದ ವಿನಾಯತಿಯಿದ್ದು, ಅದನ್ನು ಮುಂದುವರೆಯಬೇಕಾಗಿದೆ ಎಂದು ಗಡಿಪ್ರದೇಶ ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ತಿಳಿಸಿದ್ದಾರೆ.
ಒಂದು ವೇಳೆ ಕಾಸರಗೋಡಿನ ಕನ್ನಡಿಗರಿಗೂ ಮಲೆಯಾಳ ಭಾಷೆಯನ್ನು ಉದ್ಯೋಗದ ದೃಷ್ಟಿಯಿಂದ ಕಡ್ಡಾಯ ಮಾಡಿದರೆ ಅದು ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ನೀಡಿದ ರಕ್ಷಣೆಯ ಉಲ್ಲಂಘನೆ ಆಗುತ್ತದೆ. ಹಾಗಾಗಿ ಕೇರಳದ ಮುಖ್ಯಮಂತ್ರಿಯ ಜೊತೆ ರಾಜ್ಯದ ಮುಖ್ಯಮಂತ್ರಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಒಂದು ವೇಳೆ ಕನ್ನಡಿಗರಿಗೆ ಅನ್ಯಾಯವಾದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.





