ಬೇರೆ ಪಕ್ಷಕ್ಕೆ ಹೋಗಿ ಮಾಡುವುದಾದರೂ ಏನು: ಸಚಿವ ಕೆ.ಗೋಪಾಲಯ್ಯ ಪ್ರಶ್ನೆ

ಬೆಂಗಳೂರು, ಫೆ. 24: ‘ಅಧಿಕಾರ, ಸ್ಥಾನಮಾನ ನೀಡಿದಿದ್ದರೂ ಬಿಜೆಪಿ ಪಕ್ಷವನ್ನು ಬಿಡುವ ಪ್ರಶ್ನೆಯೇ ಇಲ್ಲ’ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ರಾಜೀನಾಮೆ ಕೊಟ್ಟು ಬಂದ 17 ಮಂದಿ ಬಿಜೆಪಿಯಿಂದ ಗೆದ್ದು ಶಾಸಕರಾದ ಮೇಲೆ ಪಕ್ಷ ಅಧಿಕಾರ ನೀಡಿದೆ. ಯಡಿಯೂರಪ್ಪ ಅವರು ಕೊಟ್ಟ ಮಾತಿನ ಪ್ರಕಾರವೇ ನಡೆದುಕೊಂಡಿದ್ದಾರೆ. ಆದುದರಿಂದ ಯಾರೂ ಪಕ್ಷವನ್ನು ತೊರೆಯುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದರು.
‘ಬೇರೆ ಪಕ್ಷಕ್ಕೆ ಹೋಗುತ್ತೇವೆ ಎಂದು ಯಾರೂ ಅರ್ಜಿ ಹಾಕಿ ನಿಂತುಕೊಂಡಿಲ್ಲ. ಬೇರೆ ಪಕ್ಷಗಳ ಯಾವುದೇ ನಾಯಕರೂ ನಮ್ಮ ಜತೆ ಸಂಪರ್ಕದಲ್ಲಿ ಇಲ್ಲ. ಅದರ ಅವಶ್ಯವೂ ನಮಗಿಲ್ಲ. ಬೇರೆ ಪಕ್ಷಕ್ಕೆ ಹೋಗಿ ಮಾಡುವುದಾದರೂ ಏನು? ನನಗೆ ಸಚಿವ ಸ್ಥಾನ ನೀಡಿದೆ, ಪಕ್ಷ ನಮಗೇನೂ ಕಡಿಮೆ ಮಾಡಿಲ್ಲ. ಸೋತ ಕೆಲವರನ್ನು ಪರಿಷತ್‍ಗೆ ನೇಮಕ ಮಾಡಲಾಗಿದೆ ಮತ್ತೆ ಕೆಲವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಕೆಲವರಿಗೆ ಸಿಕ್ಕಿಲ್ಲ ಈ ಬಗ್ಗೆ ಪಕ್ಷದ ಹೈಕಮಾಂಡ್ ಜೊತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ನನಗೆ ಎರಡು ಜಿಲ್ಲೆಗಳ ಉಸ್ತುವಾರಿಯನ್ನೂ ನೀಡಲಾಗಿದೆ. ಇದಕ್ಕಿಂತ ಇನ್ನೇನು ಬೇಕು. ಮುಂದಿನ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಎದುರಿಸುತ್ತೇವೆ. ರಾಜ್ಯದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ’ ಎಂದು ಗೋಪಾಲಯ್ಯ ಉತ್ತರಿಸಿದರು.







