ರಶ್ಯಾ ಅಧ್ಯಕ್ಷ ಪುಟಿನ್ ಗೆ ಕರೆಮಾಡಿ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದ ಪ್ರಧಾನಿ ಮೋದಿ: ವರದಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿ, ಉಕ್ರೇನ್‌ನಲ್ಲಿ ಇಂದು ಬೆಳಿಗ್ಗೆ ಪ್ರಾರಂಭವಾದ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಮನವಿ ಮಾಡಿದರು ಎಂದು ndtv.com ವರದಿ ಮಾಡಿದೆ. ಮಧ್ಯಸ್ಥಿಕೆಗಾಗಿ ಭಾರತಕ್ಕೆ ಉಕ್ರೇನ್ ತುರ್ತು ಮನವಿ ಮಾಡಿದ ಗಂಟೆಗಳ ನಂತರ ಈ ಸಂಭಾಷಣೆ ನಡೆಯಿತು ಎನ್ನಲಾಗಿದೆ. "ರಾಜತಾಂತ್ರಿಕ ಮಾತುಕತೆ ಮತ್ತು ಸಂವಾದದ ಹಾದಿಗೆ ಮರಳಲು ಎಲ್ಲಾ ಕಡೆಯಿಂದ ಸಂಘಟಿತ ಪ್ರಯತ್ನಗಳು ನಡೆಸುವ ಕುರಿತು ಪ್ರಧಾನಿ ಮೋದಿ ಕರೆ ನೀಡಿದ್ದಾರೆ ಎಂದು ಪ್ರಧಾನಿ ಕಚೇರಿಯ ಹೇಳಿಕೆ ತಿಳಿಸಿದೆ.
"ರಷ್ಯಾ ಮತ್ತು ನ್ಯಾಟೋ ಗುಂಪಿನ ನಡುವಿನ ಭಿನ್ನಾಭಿಪ್ರಾಯಗಳನ್ನು ಪ್ರಾಮಾಣಿಕ ಸಂಭಾಷಣೆಯ ಮೂಲಕ ಮಾತ್ರ ಪರಿಹರಿಸಬಹುದು" ಎಂದು ಅವರು ಹೇಳಿದ್ದು, ಬಳಿಕ ಉಕ್ರೇನ್‌ಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಧ್ಯಕ್ಷ ಪುಟಿನ್ ಪ್ರಧಾನಿ ಮೋದಿಗೆ ವಿವರಿಸಿದರು ಎಂದು ವರದಿ ತಿಳಿಸಿದೆ.
ಉಕ್ರೇನ್‌ನಲ್ಲಿರುವ ಭಾರತೀಯ ನಾಗರಿಕರ, ವಿಶೇಷವಾಗಿ ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತದ ಕಳವಳಗಳನ್ನು ಪ್ರಧಾನಿ ಮೋದಿ ಪುಟಿನ್ ರೊಂದಿಗೆ ಚರ್ಚಿಸಿದರು ಎಂದು ತಿಳಿದು ಬಂದಿದೆ.







