ʼನಾವು ಹೆದರದೆ ಹೇಗೆ ಇರುವುದು? ಇಲ್ಲಿನ ಪರಿಸ್ಥಿತಿ ಭಯಾನಕವಾಗಿದೆʼ: ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಅಳಲು

ಖಾರ್ಕಿವ್: ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪೂರ್ಣ ಪ್ರಮಾಣದ ಯುದ್ಧ ಘೋಷಣೆ ಆದ ಬಳಿಕ ಉಕ್ರೇನ್ ಅಕ್ಷರಶಃ ನಲುಗಿದೆ. ರಷ್ಯಾದ ಯುದ್ಧ ವಿಮಾನಗಳು ಉಕ್ರೇನ್‌ನ ಹಲವು ನಗರಗಳ ಮೇಲೆ ಬಾಂಬುಗಳನ್ನು ಸುರಿದಿದೆ. ಈ ಆಕ್ರಮಣದಲ್ಲಿ ಉಕ್ರೇನ್‌ನ ನಾಗರಿಕರು ಅಸುನೀಗುತ್ತಿದ್ದಾರೆ.
ಈ ನಡುವೆ, ಉಕ್ರೇನ್‌ನಲ್ಲಿ ಬಾಕಿಯಾಗಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಸರ್ಕಾರದ ಯೋಜನೆ ತಡವಾಗುತ್ತಿದೆ. ವಿಮಾನ ಯಾನಗಳಿಗೆ ಅವಕಾಶ ನಿರ್ಬಂಧಿಸಿರುವುದರಿಂದ ಬಹಳಷ್ಟು ವಿದ್ಯಾರ್ಥಿಗಳು, ಅನಿವಾಸಿ ಭಾರತೀಯರು ಯುದ್ಧ ಪೀಡಿತ ಉಕ್ರೇನಿನಲ್ಲಿ ಬಾಕಿಯಾಗಿದ್ದಾರೆ.
ಅವರಲ್ಲಿ ಹೆದರಬೇಡಿ, ನಿಮ್ಮ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ರಾಯಭಾರ ಕಛೇರಿ ಭರವಸೆ ನೀಡುತ್ತಿದ್ದರೂ, ಪಕ್ಕದಲ್ಲೇ ಬೀಳುತ್ತಿರುವ ಬಾಂಬ್‌ಗಳು ಅವರ ಭರವಸೆಯನ್ನು ಉಡುಗಿಸುತ್ತಿದೆ.
ಪೂರ್ವ ಉಕ್ರೇನ್‌ನ ಖಾರ್ಕಿವ್ ನಗರದಲ್ಲಿರುವ ಆಕಾಂಕ್ಷ, ಬಾಂಬ್ ದಾಳಿಯ ಸದ್ದಿಗೆ ಬೆಚ್ಚಿ ಎದ್ದಿರುವುದನ್ನು indianexpress ಜೊತೆ ಹಂಚಿಕೊಂಡಿದ್ದಾರೆ. ಅವರು ಮಾತ್ರವಲ್ಲದೇ ಅದೇ ಪ್ರದೇಶದಲ್ಲಿರುವ ವೈದ್ಯಕೀಯ ವಿದ್ಯಾರ್ಥಿ ಅರುಜ್ ಕೂಡಾ ತಮ್ಮ ಇಂತಹ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಖಾರ್ಕಿವ್ ಪಟ್ಟಣದಿಂದ ಫೋನ್ ಮೂಲಕ ಮಾತನಾಡಿದ indianexpress ಅರುಜ್, ತಾವು ಯುದ್ಧಗ್ರಸ್ತ ಉಕ್ರೇನ್‌ನಲ್ಲಿ ಸಿಲುಕಿರುವ ಬಗ್ಗೆ ತಿಳಿಸಿದ್ದಾರೆ. ಇವರಿಬ್ಬರೂ VN Karazin Kharkiv National University ಯ ವಿದ್ಯಾರ್ಥಿಗಳು.
ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ವೈದ್ಯಕೀಯ ಶಾಲೆಯಲ್ಲಿ ತಮ್ಮ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟ ಸ್ಥಳೀಯ ಏಜೆಂಟರು ನಮ್ಮನ್ನು ಭಯಪಡಬೇಡಿ ಎಂದು ಹೇಳುತ್ತಿದ್ದಾರೆ. ಆದರೆ, ಇಲ್ಲಿ ಭಯಪಡದೆ ಇರುವುದು ಹೇಗೆ, ಇಲ್ಲಿನ ಪರಿಸ್ಥಿತಿ ಭಯಾನಕವಾಗಿದೆ ಎಂದು ಕಾನ್ಪುರ ಮೂಲದ ಆಕಾಂಕ್ಷಾ ಅಳಲು ತೋಡಿಕೊಂಡಿದ್ದಾರೆ.
ನನ್ನ ಕೆಲವೇ ಕೆಲವು ಸ್ನೇಹಿತರಿಗೆ ಇಲ್ಲಿಂದ ಭಾರತಕ್ಕೆ ಮರಳಲು ಸಾಧ್ಯವಾಗಿದೆ. ನಾನೂ ಟಿಕೆಟ್ ಬುಕ್ ಮಾಡಲು ಪ್ರಯತ್ನಿಸಿದೆ, ಆದರೆ, ನನಗೆ ಟಿಕೆಟ್ ಲಭಿಸಿಲ್ಲ, ಟಿಕೆಟ್ ದರ 60 ಸಾವಿರಕ್ಕೂ ಅಧಿಕವಾಗಿದೆ ಎಂದು ಆಕಾಂಕ್ಷ ತಿಳಿಸಿದ್ದಾರೆ.
ಕಾನ್ಪುರ ಮೂಲದ ಅರ್ಪಿತ್ ಕಟಿಯಾರ್ ಕೂಡಾ ಇದೇ ಆತಂಕವನ್ನು ಹಂಚಿಕೊಂಡಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ನಮ್ಮ ಪ್ರವೇಶ ಮತ್ತು ವಾಸ್ತವ್ಯದ ವ್ಯವಸ್ಥೆ ಮಾಡಿದ ನಮ್ಮ ಸ್ಥಳೀಯ ಏಜೆಂಟ್ ಕೂಡ ನಾವು ಭಯಪಡಬಾರದು ಎಂದು ಹೇಳುತ್ತಿದ್ದಾರೆ. ಆದರೆ ಬಾಂಬ್‌ಗಳನ್ನು ಬೀಳುತ್ತಿರುವಾಗ ಯಾರಾದರೂ ಭಯಪಡದೆ ಇರುವುದು ಹೇಗೆ? ಏನು ಮಾಡಬೇಕೆಂದು ನನಗೆ ಗೊತ್ತಿಲ್ಲ. ಈಗ ವಾಯುಪ್ರದೇಶವನ್ನೂ ನಿರ್ಬಂಧಿಸಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ನಾನು ಹಿಂತಿರುಗಲು ಸಾಧ್ಯವಾಗುತ್ತದೆಯೇ ಎಂದು ನನಗೆ ತಿಳಿದಿಲ್ಲ,” ಎಂದು ಅರ್ಪಿತ್ ಹೇಳಿದ್ದಾರೆ.
ಗುರುವಾರ, ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಉಕ್ರೇನ್‌ನಲ್ಲಿರುವ ಭಾರತೀಯರನ್ನು "ನೀವು ನಿಮ್ಮ ಮನೆಗಳು, ಹಾಸ್ಟೆಲ್‌ಗಳು, ವಸತಿ ಅಥವಾ ಎಲ್ಲಿದ್ದರೂ ಶಾಂತವಾಗಿರಿ ಮತ್ತು ಸುರಕ್ಷಿತವಾಗಿರಿ" ಎಂದು ಸಲಹೆ ನೀಡಿದೆ.







