ರಶ್ಯಾದಿಂದ ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ: ಗಗನಕ್ಕೇರಿದ ಚಿನ್ನ, ಕಚ್ಛಾತೈಲದ ದರ

ಸಾಂದರ್ಭಿಕ ಚಿತ್ರ
ರಿಯಾದ್, ಫೆ.24: ಉಕ್ರೇನ್ ಮೇಲಿನ ಆಕ್ರಮಣವನ್ನು ಗುರುವಾರ ರಶ್ಯಾ ಅಧಿಕೃತವಾಗಿ ಘೋಷಿಸುವುದರೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಗಗನಕ್ಕೇರಿದೆ. ಕಚ್ಛಾತೈಲದ ದರ ಬ್ಯಾರಲ್ಗೆ 100 ಡಾಲರ್ ಗಡಿ ದಾಟಿದ್ದರೆ ಕ್ರಿಪ್ಟೊಕರೆನ್ಸಿ ದರ ತೀವ್ರ ಕುಸಿದಿದೆ. ರಶ್ಯಾದ ಕರೆನ್ಸಿ ರೂಬಲ್ನ ವ್ಯವಹಾರವನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
ವಿಶ್ವದಲ್ಲಿ ಅತ್ಯಧಿಕ ತೈಲ ಉತ್ಪಾದಿಸುವ ದೇಶಗಳಲ್ಲಿ ದ್ವಿತೀಯ ಸ್ಥಾನದಲ್ಲಿರುವ ರಶ್ಯಾವು ಯುರೋಪ್ನ ತೈಲ ಸಂಸ್ಕರಣಾ ಘಟಕಗಳಿಗೆ ಹೆಚ್ಚಿನ ಕಚ್ಛಾತೈಲ ಪೂರೈಸುತ್ತಿದೆ. ಅಲ್ಲದೆ ಯುರೋಪ್ಗೆ ಪೂರೈಕೆಯಾಗುವ ಪ್ರಾಕೃತಿಕ ಅನಿಲದ 35%ದಷ್ಟನ್ನು ರಶ್ಯಾ ಒದಗಿಸುತ್ತಿದೆ. ಮಾಸ್ಕೊ ಎಕ್ಸ್ಚೇಂಜ್ನಲ್ಲಿ ಗುರುವಾರದ ವ್ಯವಹಾರ ಆರಂಭವಾಗುತ್ತಿದ್ದಂತೆಯೇ ಡಾಲರ್ ಎದುರು 3.6% ಪ್ರಮಾಣದಲ್ಲಿ ಅಪಮೌಲ್ಯಗೊಂಡು ಮುಖಬೆಲೆ 84.0750ಕ್ಕೆ ಕುಸಿಯಿತು. ಯುರೋ ಎದುರು ರೂಬಲ್ 3.9% ಮೌಲ್ಯ ಕಳೆದುಕೊಂಡು 95.2425ಕ್ಕೆ ಕುಸಿದ ಹಿನ್ನೆಲೆಯಲ್ಲಿ ರೂಬಲ್ನ ವ್ಯವಹಾರವನ್ನು ರದ್ದುಗೊಳಿಸಲಾಗಿದೆ ಎಂದು ಮಾಸ್ಕೊ ಎಕ್ಸ್ಚೇಂಜ್ನ ಸಂಯೋಜಕರಾದ ಎಂಒಇಎಕ್ಸ್ ಸಂಸ್ಥೆ ಹೇಳಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಛಾತೈಲದ ದರದಲ್ಲಿ 6.5% ಏರಿಕೆಯಾಗಿ ಬ್ಯಾರಲ್ಗೆ 103.78 ಡಾಲರ್ಗೆ ತಲುಪಿದೆ. ನ್ಯೂಯಾರ್ಕ್ ಸ್ಟಾಕ್ಎಕ್ಸ್ಚೇಂಜ್ನ ಡೋವ್ ಜಾನ್ಸನ್ ಫ್ಯೂಚರ್ ಇಂಡೆಕ್ಸ್ ಗುರುವಾರ 700 ಅಂಕಗಳಷ್ಟು ಕುಸಿತ ಕಂಡಿದ್ದರೆ, ನಾಸ್ಡಾಕ್ ಫ್ಯೂಚರ್ಸ್ 2.7% ಕುಸಿತ ದಾಖಲಿಸಿದೆ. ಭಾರತ್ ಪೆಟ್ರೋಲಿಯಂ, ಪೆಟ್ರೋನೆಟ್ನ ಶೇರುಗಳ ಮೌಲ್ಯ 6% ಕುಸಿದಿದೆ. ಲಂಡನ್ ಶೇರು ಮಾರುಕಟ್ಟೆಯಲ್ಲಿ ರಶ್ಯಾದ ಸಂಸ್ಥೆಗಳ ಶೇರುಗಳ ಮೌಲ್ಯ ಪಾತಾಳಕ್ಕೆ ಇಳಿದಿದ್ದು ಎಸ್ಬರ್ ಬ್ಯಾಂಕ್ನ ಶೇರುಗಳ ಮೌಲ್ಯ 75%ದಷ್ಟು ಕುಸಿದಿದ್ದರೆ, ವಿಟಿಬಿ ಶೇರುಗಳ ಮೌಲ್ಯ 22%ದಷ್ಟು, ರೋಸ್ನೆಫ್ಟ್ ಶೇರು ಮೌಲ್ಯ 23%ದಷ್ಟು, ಗಾರ್ಪ್ರೋಮ್ನ ಶೇರುಗಳ ಮೌಲ್ಯ 36%ದಷ್ಟು ಕುಸಿದಿದೆ.
ವಿಶ್ವದ 6%ದಷ್ಟು ಅಲ್ಯುಮೀನಿಯಂ ಅನ್ನು ರಶ್ಯಾ ಉತ್ಪಾದಿಸುತ್ತಿದ್ದು ಉಕ್ರೇನ್ ಬಿಕ್ಕಟ್ಟಿನಿಂದಾಗಿ ಅಲ್ಯುಮೀನಿಯಂನ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ರಶ್ಯಾದಲ್ಲಿ ಮುಂಚೂಣಿ ವಲಯದಲ್ಲಿರುವ ಹಲವು ಅಂತರಾಷ್ಟ್ರೀಯ ಬ್ಯಾಂಕ್ಗಳ ವ್ಯವಹಾರ ತೀವ್ರವಾಗಿ ಕುಸಿದಿದೆ. ಆಸ್ಟ್ರಿಯಾದ ರೈಫೀಸನ್ ಬ್ಯಾಂಕ್ ಇಂಟರ್ನ್ಯಾಷನಲ್ನ ವ್ಯವಹಾರ 12%ದಷ್ಟು, ಇಟಲಿಯ ಯುನಿಕ್ರೆಡಿಟ್ನ ವ್ಯವಹಾರ 6.5%ದಷ್ಟು, ಫ್ರಾನ್ಸ್ನ ಸೊಸೆಟಿ ಜನರಲ್ ಬ್ಯಾಂಕ್ನ ವ್ಯವಹಾರ 5.3% ಕುಸಿದಿದೆ. ಪ್ರಮುಖ ಬ್ಯಾಂಕ್ಗಳ ಶೇರುಗಳ ಮೌಲ್ಯವೂ ಕುಸಿದಿದೆ.
ಕ್ರಿಪ್ಟೊಕರೆನ್ಸಿ ಮಾರುಕಟ್ಟೆ ವ್ಯವಹಾರ ತೀವ್ರ ಪ್ರಮಾಣದಲ್ಲಿ ಕುಸಿದಿದ್ದು ಬಿಟ್ಕಾಯಿನ್ನ ಮೌಲ್ಯ 7.8%ದಷ್ಟು ಕುಸಿದು 35,084 ಡಾಲರ್ಗೆ ಇಳಿದಿದೆ. ಮತ್ತೊಂದು ಪ್ರಮುಖ ಕ್ರಿಪ್ಟೊಕರೆನ್ಸಿ ಎಥೆರಿಯಮ್ನ ಮೌಲ್ಯ 9.7% ಕುಸಿದು 2,396.93 ಡಾಲರ್ಗೆ ತಲುಪಿದೆ.
ಗುರುವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ, ಕಳೆದ ಒಂದು ವರ್ಷದಲ್ಲೇ ಗರಿಷ್ಟ ಮಟ್ಟಕ್ಕೆ ತಲುಪಿದ್ದು 2% ಏರಿಕೆಯಾಗಿದೆ. ಚಿನ್ನದ ದರ ಔನ್ಸ್ಗೆ 1.9% ಏರಿಕೆಯಾಗಿದ್ದು 1,943.86 ಡಾಲರ್ಗೆ ತಲುಪಿದ್ದು ಕಳೆದ ವರ್ಷದ ಜನವರಿ ಬಳಿಕ ಇದು ಗರಿಷ್ಟ ದರವಾಗಿದೆ. ಬೆಳ್ಳಿಯ ದರ ಔನ್ಸ್ಗೆ 1.5% ಏರಿಕೆಯಾಗಿ 24.91 ಡಾಲರ್ಗೆ , ಪ್ಲಾಟಿನಂ ದರ 0.5% ಏರಿಕೆಯಾಗಿ 1,097.01 ಡಾಲರ್ಗೆ ತಲುಪಿದೆ.







