ಶಿರವಸ್ತ್ರದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ತಡೆಯುವ ಹುನ್ನಾರ ವಿರೋಧಿಸಿ ಎಸ್ಸೆಸೆಫ್ ಪ್ರತಿಭಟನೆ

ಉಡುಪಿ: ಕೆಲವು ರಾಜಕೀಯ ಪಕ್ಷಗಳಿಗೆ ಮುಸ್ಲಿಮರು ಮತ್ತು ಪಾಕಿಸ್ತಾನ ಎಂಬುದು ಚಿನ್ನದ ಮೊಟ್ಟೆ ಇಡುವ ಕೋಳಿ ಇದ್ದಂತೆ. ಇದರಿಂದಲೇ ಅವರು ತಮ್ಮ ಮತಗಳನ್ನು ಹೆಚ್ಚುತ್ತಿದ್ದಾರೆ. ಒಟ್ಟಾರೆ ಇವರ ಗುರಿ ಮುಸ್ಲಿಮರೇ ಹೊರತು ಹಿಜಾಬ್ ಅಲ್ಲ ಎಂದು ಎಸ್ಸೆಸ್ಸೆಫ್ ಮುಖಂಡ ಹುಸೇನ್ ಸಅದಿ ಹೊಸ್ಮಾರು ಟೀಕಿಸಿದ್ದಾರೆ.
ಹೈಕೋರ್ಟ್ ಮಧ್ಯಂತರ ಆದೇಶವನ್ನು ತಪ್ಪಾಗಿ ಅರ್ಥೈಸಿ ಶಿರವಸ್ತ್ರದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ತಡೆಯುವ ಹುನ್ನಾರವನ್ನು ವಿರೋಧಿಸಿ ಎಸ್ಸೆಸೆಫ್ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಗುರುವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಇಂದು ರಾಜಕೀಯ ಪಕ್ಷಗಳು ಅಭಿವೃದ್ಧಿ ವಿಚಾರಗಳನ್ನು ಮಾತನಾಡುತ್ತಿಲ್ಲ. ಬಡತನ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಮೌನ ವಹಿಸಲಾಗಿದೆ. ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ನಿರಾಕರಿಸುವ ಮೂಲಕ ಅವಮಾನ ಮಾಡಿರುವ ಕೇಂದ್ರ ಸರಕಾರ, ಬಿಲ್ಲವರ ವಿರೋಧವನ್ನು ಬೇರೆ ಕಡೆ ಕೊಂಡೊಯ್ಯಲು ಹಿಜಾಬ್ ವಿಚಾರವನ್ನು ದೊಡ್ಡದು ಮಾಡಿದ್ದಾರೆ ಎಂದು ಅವರು ದೂರಿದರು.
ಎಸ್ಸೆಸ್ಸೆಫ್ ಮುಖಂಡ ಮುನೀರ್ ಅಹ್ಮದ್ ಸಖಾಫಿ ಉಳ್ಳಾಲ ಮಾತನಾಡಿ, ಹಿಜಾಬ್ ವಿಚಾರದಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಗೇಟಿನಲ್ಲಿಯೇ ತಡೆಯುವ ಮೂಲಕ ಕಾಲೇಜು ಆಡಳಿತ ಮಂಡಳಿಗಳು ಮಾನವೀಯತೆ ಮರೆತಂತೆ ವರ್ತಿಸುತ್ತಿವೆ. ವಿದ್ಯಾರ್ಥಿಗಳನ್ನು ಧರ್ಮದ ಹೆಸರಿನಲ್ಲಿ ವಿಭಜಿಸಿ ಅವರ ಬೇಳೆ ಬೇಯಿಸಿಕೊಳ್ಳುವ ಕಾರ್ಯವನ್ನು ರಾಜಕೀಯ ಪಕ್ಷಗಳು ಮಾಡು ತ್ತಿವೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಶಬ್ಬೀರ್ ಸಖಾಫಿ ಪಣಿಯೂರು, ರಾಜ್ಯ ಎಸ್ಸೆಸ್ಸೆಫ್ ಕ್ಯಾಂಪಸ್ ಸಿಂಡಿಕೇಟ್ ಸದಸ್ಯ ಮುಹಮ್ಮದ್ ರಕೀಬ್ ಕನ್ನಂಗಾರ್, ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಮಜೂರು, ಕೋಶಾಧಿ ಕಾರಿ ಅಲ್ತಾಫ್, ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಶಾಹುಲ್ ಹಮೀದ್ ನಈಮಿ, ಕ್ಯಾಂಪಸ್ ಕನ್ವೀನರ್ ಹಾರಿಸ್ ಮಾಸ್ಟರ್, ಎನ್.ಸಿ.ರಹೀಂ ಮೊದ ಲಾದವರು ಉಪಸ್ಥಿತರಿದ್ದರು.







