ಶಿವಮೊಗ್ಗದ ಬಿಜೆಪಿ ಟಿಕೆಟ್ ಇವರಿಗೆ ಸಿಗಲಿ
ಮಾನ್ಯರೇ,
ಶಿವಮೊಗ್ಗದಲ್ಲಿ ಕೊಲೆಯಾದ ಸಂಘ ಪರಿವಾರದ ಕಾರ್ಯಕರ್ತ ಹರ್ಷ ಅವರ ಕುಟುಂಬ ಸದಸ್ಯರಿಗೆ ಬಿಜೆಪಿ ವಿಧಾನ ಸಭಾ ಚುನಾವಣೆಯ ಟಿಕೆಟ್ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೇಡಿಕೆ ಕೇಳಿ ಬಂದಿದೆ. ಇದು ನಿಜವಾಗಿಯೂ ಬಿಜೆಪಿ ಗಂಭೀರವಾಗಿ ಯೋಚಿಸಬೇಕಾದ ವಿಚಾರವಾಗಿದೆ. ಸಂಘ, ಬಿಜೆಪಿ ಪ್ರತಿಪಾದಿಸುವ ಹಿಂದುತ್ವಕ್ಕಾಗಿ ಸಕ್ರಿಯವಾಗಿ ದುಡಿಯುತ್ತಿದ್ದ ಹುಡುಗ ಹರ್ಷ. ಈಗ ಜೀವ ಕಳೆದುಕೊಂಡಿದ್ದಾನೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಅದು ಯಾವ ಕೊಲೆಗಡುಕರಿಗೂ ಅಷ್ಟೇ. ಇನ್ನು ಆತನ ಕುಟುಂಬಕ್ಕೆ ಬಿಜೆಪಿ ನಾಯಕರು ಹೋಗಿ ಸಾಂತ್ವನ ಹೇಳುವುದು, ಧನಸಹಾಯ ನೀಡುವುದು ಇತ್ಯಾದಿ ತಕ್ಷಣದ ಸಮಾಧಾನ ನೀಡುತ್ತದೆ ಅಷ್ಟೇ. ಆದರೆ ಬಿಜೆಪಿ ಹೇಳಿದಂತೆ ಹಿಂದುತ್ವಕ್ಕಾಗಿಯೇ ಹರ್ಷ ಹತನಾಗಿದ್ದಾನೆ ಎಂದಾದರೆ ಆತನ ಕುಟುಂಬಕ್ಕೆ ಬಿಜೆಪಿ ಹಾಗೂ ಸಂಘ ಪರಿವಾರ ಕೊಡಬಹುದಾದ ಅತಿ ಸೂಕ್ತ ಪರಿಹಾರ ಆತನ ಸಮೀಪ ಸಂಬಂಧಿಯೊಬ್ಬರನ್ನು ವಿಧಾನಸಭೆಗೆ ಕಳಿಸುವುದು. ಮುಂದಿನ ಚುನಾವಣೆಯಲ್ಲಿ ಆತನ ತಂದೆ, ತಾಯಿ ಅಥವಾ ಅಕ್ಕನನ್ನು ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದಿಂದ ಪಕ್ಷದ ಟಿಕೆಟ್ ಕೊಡಿಸಿ ಭರ್ಜರಿ ಬಹುಮತದಿಂದ ಗೆಲ್ಲಿಸುವ ಸಂಪೂರ್ಣ ಜವಾಬ್ದಾರಿಯನ್ನು ಈಶ್ವರಪ್ಪ, ಅವರ ಪುತ್ರ ಕಾಂತೇಶ್ ಹಾಗೂ ಬಿಜೆಪಿ ಹೊತ್ತುಕೊಳ್ಳಬೇಕು. ಹೀಗೆ ಮಾಡುವುದರಿಂದ ಹಿಂದುತ್ವ ಕಾರ್ಯಕರ್ತರನ್ನು ಬಿಜೆಪಿ ಬಳಸಿ ಬಿಟ್ಟು ಬಿಡುತ್ತದೆ, ಜೀವ ಹೋಗುವುದು ಯಾರೋ ಬಡವರ ಮಕ್ಕಳದ್ದು ಎಂಬಿತ್ಯಾದಿ ಕಾಂಗ್ರೆಸ್ ಹಾಗೂ ಜಾತ್ಯತೀತರ ಅಪಪ್ರಚಾರಕ್ಕೆ ಕಡಿವಾಣ ಬೀಳುತ್ತದೆ. ಬಿಜೆಪಿ ಮತ್ತು ಈಶ್ವರಪ್ಪಅವರು ಕೂಡಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ರಾಗಬೇಕು. ಈಗಲೇ ಶಿವಮೊಗ್ಗ ಬಿಜೆಪಿ ಟಿಕೆಟ್ ಹರ್ಷನ ತಾಯಿ ಅಥವಾ ಅಕ್ಕನಿಗೆ ಎಂದು ಘೋಷಿಸಬೇಕು.





