ಉಳ್ಳಾಲ ಭಾರತ್ ಪಿಯು ಕಾಲೇಜಿನಲ್ಲಿ ಮುಂದುವರಿದ ಹಿಜಾಬ್ ಗೆ ನಿರ್ಬಂಧ
2 ದಿನವೂ 16 ವಿದ್ಯಾರ್ಥಿನಿಯರಿಗೆ ತರಗತಿ ಬಹಿಷ್ಕಾರ

ಉಳ್ಳಾಲ, ಫೆ.25: ಉಳ್ಳಾಲ ಭಾರತ್ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಗೆ ನಿರ್ಬಂಧ ಮುಂದುವರಿದಿದ್ದು, ಎರಡನೇ ದಿನವಾದ ಶುಕ್ರವಾರವೂ ಹಿಜಾಬ್ ಧಾರಿಣಿ ವಿದ್ಯಾರ್ಥಿನಿಯರಿಗೆ ತರಗತಿ ಬಹಿಷ್ಕರಿಸಲಾಗಿದೆ. ಈ ನಡುವೆ ವಿದ್ಯಾರ್ಥಿನಿಯರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾಲೇಜಿಗೆ ಇಂದು ರಜೆ ಘೋಷಿಸಲಾಗಿದೆ.
ಭಾರತ್ ಪದವಿ ಪೂರ್ವ ಕಾಲೇಜಿನಲ್ಲಿ ಸರಕಾರದ ಆದೇಶದ ಕಾರಣಕ್ಕೆ ಹಿಜಾಬ್ ಧಾರಿಣಿ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನೀಡಲಾಗದು ಎಂದು ಆಡಳಿತ ಸಮಿತಿ ಗುರುವಾರ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರಕಳಿಸಿತ್ತು. ಇಂದು ಕೂಡಾ ಹಿಜಾಬ್ ಧಾರಿಣಿ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ 16 ವಿದ್ಯಾರ್ಥಿನಿಯರು ಕಾಲೇಜು ಎದುರು ಜಮಾಯಿಸಿ ಈ ಮೊದಲಿದ್ದಂತೆ ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಧರಣಿ ನಡೆಸಿದರು.
ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕಾರ
ತರಗತಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲ್ಪಟ್ಟ ಹಿಜಾಬ್ ಧಾರಿಣಿ ವಿದ್ಯಾರ್ಥಿನಿಯರಿಗೆ ಬೆಂಬಲವಾಗಿ ವಿದ್ಯಾರ್ಥಿಗಳೂ ತರಗತಿ ಬಹಿಷ್ಕರಿಸಿದರು.
21 ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಹಿಜಾಬ್ ಧಾರಿಣಿ ವಿದ್ಯಾರ್ಥಿನಿಯರೊಂದಿಗೆ ಕಾಲೇಜು ಎದುರು ಜಮಾಯಿಸಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಡಿಸಿಪಿ ಹರಿರಾಂ, ಎಸಿಪಿ ದಿನಕರ್, ಉಳ್ಳಾಲ ಇನ್ ಸ್ಪೆಕ್ಟರ್ ಸಂದೀಪ್ ಆಗಮಿಸಿ ಧರಣಿನಿರತ ವಿದ್ಯಾರ್ಥಿನಿಯರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ನಮಗೆ ಹಿಜಾಬ್ ಧರಿಸಿ ತರಗತಿಗೆ ಪ್ರವೇಶಾವಕಾಶ ಕಲ್ಪಿಸಿ ಎಂದು ವಿದ್ಯಾರ್ಥಿನಿಯರು ಮನವಿ ಮಾಡಿದರು. ಈ ನಡುವೆ ಗೊಂದಲದ ಹಿನ್ನೆಲೆಯಲ್ಲಿ ಶುಕ್ರವಾರ ಕಾಲೇಜಿಗೆ ರಜೆ ಘೋಷಿಸಲಾಗಿದೆ
ಶಾಸಕ ಯು.ಟಿ.ಖಾದರ್ ಭೇಟಿ
ಹಿಜಾಬ್ ಗೊಂದಲದ ಹಿನ್ನೆಲೆಯಲ್ಲಿ ಕಾಲೇಜಿಗೆ ಶಾಸಕ ಹಾಗೂ ವಿಧಾನಸಭಾ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಭೇಟಿ ನೀಡಿದ್ದಾರೆ.
ಕಾಲೇಜಿನಲ್ಲಿ ಶಾಸಕ ಯು.ಟಿ .ಖಾದರ್, ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಮೊಗವೀರ ಸಂಘದವರು ಜತೆಯಾಗಿ ಆಡಳಿತ ಮಂಡಳಿ ಹಾಗೂ ಪೋಷಕರ ಸಭೆ ನಡೆಸಿದ್ದಾರೆ.
ಇದೀಗ ಶಾಸಕರ ನೇತೃತ್ವದಲ್ಲಿ ಕಾಲೇಜು ಆಡಳಿತ ಸಮಿತಿ ಹಾಗೂ ವಿದ್ಯಾರ್ಥಿಗಳ ಪೋಷಕರು, ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಮೊಗವೀರ ಸಂಘದವರು ಸಭೆ ನಡೆಸಿದರು. ತಹಶೀಲ್ದಾರ್ ಗುರುಪ್ರಸಾದ್ ಉಪಸ್ಥಿತರಿದ್ದರು.
ಸಭೆಯಲ್ಲಿ ಹಿಜಾಬ್ ಗೆ ಸಂಬಂಧಿಸಿ ಸ್ಪಷ್ಟ ತೀರ್ಮಾನ ತೆಗದುಕೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು(ಫೆ.25) ಸಂಜೆ 4 ಗಂಟೆಗೆ ದ.ಕ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಸಭೆಯ ಬಳಿಕ ಯು.ಟಿ.ಖಾದರ್ ತಿಳಿಸಿದ್ದಾರೆ.