ಸಂಕೇಶ್ವರದಲ್ಲಿ ರಸ್ತೆ ಅಪಘಾತ: ಒಂದೇ ಬೈಕ್ ನಲ್ಲಿ ಸಂಚರಿಸುತ್ತಿದ್ದ ನಾಲ್ವರು ಗೆಳೆಯರು ಮೃತ್ಯು

ಸಾಂದರ್ಭಿಕ ಚಿತ್ರ
ಸಂಕೇಶ್ವರ, ಫೆ.25: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಬೈಕ್ ನಲ್ಲಿ ಸಂಚರಿಸುತ್ತಿದ್ದ ನಾಲ್ವರು ಯುವಕರು ಮೃತಪಟ್ಟ ಘಟನೆ ನಗರ ಹೊರ ವಲಯದಲ್ಲಿ ಗುರುವಾರ ತಡರಾತ್ರಿ 11:30ರ ಸುಮಾರಿಗೆ ಸಂಭವಿಸಿದೆ.
ಮೃತರನ್ನು ಸಂಕೇಶ್ವರದ ಅನಂತ ವಿದ್ಯಾ ನಗರ ನಿವಾಸಿಗಳಾದ ಬಸವರಾಜ ಮಾಳಿ (26), ಪ್ರವೀಣ ಸನದಿ(29), ಮೆಹಬೂಬ ಸಗಡಿ(21) ಮತ್ತು ಬೆಳಗಾವಿಯ ಖಂಜರ್ ಗಲ್ಲಿಯ ನಿವಾಸಿ ಫರಾಣ ಜಮಾದಾರ (21) ಎಂದು ಗುರುತಿಸಲಾಗಿದೆ. ಈ ಪೈಕಿ ಮೂವರು ಸ್ಥಳದಲ್ಲೆ ಸಾವನ್ನಪ್ಪಿದ್ದರೆ, ಓರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.
ಗೆಳೆಯರಾದ ಈ ನಾಲ್ವರು ಗುರುವಾರ ತಡರಾತ್ರಿ ದ್ವಿಚಕ್ರ ವಾಹನವೊಂದರಲ್ಲಿ ಕಣಗಲಾ ಕಡೆಯಿಂದ ಸಂಕೇಶ್ವರ ಕಡೆಗೆ ಬರುತ್ತಿರುವಾಗ ಸಂಕೇಶ್ವರ ನಗರದ ಹೊರ ವಲಯದ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಅವಘಡ ನಡೆದಿದೆ. ಆದರೆ ಇವರ ಬೈಕಿಗೆ ಯಾವ ವಾಹನ ಢಿಕ್ಕಿಯಾಗಿದೆ ಎಂಬುದು ತಿಳಿದುಬಂದಿಲ್ಲ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸಂಕೇಶ್ವರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





