ಉಕ್ರೇನ್: ಮೆಟ್ರೋ ನಿಲ್ದಾಣದಲ್ಲಿ ಆಶ್ರಯ ಪಡೆದಿರುವ ಭಾರತೀಯ ವಿದ್ಯಾರ್ಥಿಗಳಿಂದ ನೆರವಿಗಾಗಿ ಪ್ರಧಾನಿ ಮೊರೆ

ಹೊಸದಿಲ್ಲಿ: ರಷ್ಯಾದ ಆಕ್ರಮಣದ ನಡುವೆ ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಮನೆಗೆ ಮರಳಲು ಸಹಾಯ ಯಾಚಿಸುತ್ತಿರುವ ವೀಡಿಯೊಗಳು ವೈರಲ್ ಆಗಿವೆ. ಕೆಲವು ವಿದ್ಯಾರ್ಥಿಗಳು ತಮ್ಮ ಅಪಾರ್ಟ್‌ಮೆಂಟ್‌ಗಳನ್ನು ತೊರೆದಿಲ್ಲ. ಇತರರು ಬಾಂಬ್ ಶೆಲ್ಟರ್‌ಗಳಾಗಿ ಕಾರ್ಯನಿರ್ವಹಿಸಬಹುದಾದ ಭೂಗತ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಆಶ್ರಯ ಪಡೆದಿದ್ದಾರೆ. ಸುಮಾರು 16,000 ಭಾರತೀಯರು ಉಕ್ರೇನ್‌ನಲ್ಲಿದ್ದಾರೆ, ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು.
ಅಂತಹ ಒಂದು ವೀಡಿಯೊದಲ್ಲಿ, ಭಾರತೀಯ ವಿದ್ಯಾರ್ಥಿಯೊಬ್ಬ ಭಾರತೀಯರನ್ನು ಸ್ಥಳಾಂತರಿಸಲು ತ್ವರಿತ ವ್ಯವಸ್ಥೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ವಿನಂತಿಸುತ್ತಿದ್ದಾನೆ. ಮನೀಶ್ ಜೈಸ್ವಾಲ್ ಎಂಬ ವಿದ್ಯಾರ್ಥಿ ಉಕ್ರೇನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ಉತ್ತರ ಪ್ರದೇಶದ ಬಲ್ಲಿಯಾ ಮೂಲದವನು.
"ನಾವು ಅಸಹಾಯಕರಾಗಿದ್ದೇವೆ. ಬೆಳಿಗ್ಗೆಯಿಂದ ನಗರದಲ್ಲಿ ಮೂರು-ನಾಲ್ಕು ಬಾಂಬ್‌ಗಳು ಬಿದ್ದಿವೆ. ನಮಗೆ ತಿನ್ನಲು, ಕುಡಿಯಲು ಏನನೂ ಸಿಗುತ್ತಿಲ್ಲ. ವಿಮಾನ ಮಾರ್ಗಗಳು ಮುಚ್ಚಲ್ಪಟ್ಟಿವೆ. ಸಾಧ್ಯವಾದಷ್ಟು ಬೇಗ ಭಾರತೀಯರನ್ನು ಸ್ಥಳಾಂತರಿಸಲು ವ್ಯವಸ್ಥೆ ಮಾಡಲು ನಾನು ನರೇಂದ್ರ ಮೋದಿಜಿ ಮತ್ತು ಯೋಗಿ ಆದಿತ್ಯನಾಥ್ ಜಿ ಅವರನ್ನು ವಿನಂತಿಸುತ್ತೇನೆ ಎಂದು ಜೈಸ್ವಾಲ್ ಅವರು ತಮ್ಮ ಅಪಾರ್ಟ್ಮೆಂಟ್ ನಲ್ಲಿ ಚಿತ್ರೀಕರಿಸಿದ ವೀಡಿಯೊದಲ್ಲಿ ಹೇಳಿದರು. ಅವರು ಉಕ್ರೇನ್‌ನಲ್ಲಿ ಯಾವ ನಗರದಲ್ಲಿ ವಾಸಿಸುತ್ತಿದ್ದಾರೆಂದು ಉಲ್ಲೇಖಿಸಲಿಲ್ಲ.
ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಕಳುಹಿಸಿದ ವೀಡಿಯೊದಲ್ಲಿ ಜನರು ಮೆಟ್ರೋ ರೈಲು ನಿಲ್ದಾಣದ ನೆಲಮಾಳಿಗೆಯ ನೆಲದಲ್ಲಿ ಕುಳಿತಿರುವುದನ್ನು ಕಾಣಬಹುದು. ಪಶ್ಚಿಮ ಉಕ್ರೇನ್‌ನ ಟೆರ್ನೋಪಿಲ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ನಿಲೇಶ್ ಜೈನ್ ಅವರು ಸುಮಾರು 30 ಗಂಟೆಗಳ ಕಾಲ ಮೆಟ್ರೋ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾಗಿ ಹೇಳಿದರು.
"ಇಂಟರ್ನೆಟ್ ಸಂಪರ್ಕವು ಉತ್ತಮವಾಗಿಲ್ಲ. ನಾವು ಬಾಂಬ್ ಸ್ಫೋಟಿಸುವ ಶಬ್ದವನ್ನು ಕೇಳುತ್ತಿದ್ದೇವೆ. ದಯವಿಟ್ಟು ನಮಗೆ ಸಹಾಯ ಮಾಡಿ. ನಮ್ಮನ್ನು ಇಲ್ಲಿಂದ ತ್ವರಿತವಾಗಿ ಸ್ಥಳಾಂತರಿಸುವಂತೆ ನಾನು ಪ್ರಧಾನಿ ಮೋದಿಜಿ ಅವರಿಗೆ ಮನವಿ ಮಾಡುತ್ತೇನೆ" ಎಂದು ಜೈನ್ ಹೇಳಿದರು.
ಕೂನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಗುಜರಾತ್‌ನ ಭಾರತೀಯ ವಿದ್ಯಾರ್ಥಿಯೊಬ್ಬ, ಎಟಿಎಂಗಳು ಮತ್ತು ಅಂಗಡಿಗಳಲ್ಲಿ ಉದ್ದನೆಯ ಸರತಿ ಸಾಲುಗಳಿವೆ. ಎಲ್ಲರೂ ಭಯಭೀತರಾಗಿದ್ದಾರೆ ಎಂದು ಹೇಳಿದರು.
ಉಕ್ರೇನ್ ತನ್ನ ವಾಯುಪ್ರದೇಶವನ್ನು ಮುಚ್ಚಿದ ನಂತರ ಅವರ ವಿಮಾನಗಳು ರದ್ದಾದ ಕಾರಣ ಭಾರತಕ್ಕೆ ವಿಮಾನಗಳನ್ನು ಕಾಯ್ದಿರಿಸಿದ ವಿದ್ಯಾರ್ಥಿಗಳು ಮನೆಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ವಿದ್ಯಾರ್ಥಿಯೊಬ್ಬ ಹೇಳಿದ್ದಾನೆ.







