ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಲಿಯಾಂಡರ್ ಪೇಸ್ ತಪ್ಪಿತಸ್ಥ: ನ್ಯಾಯಾಲಯ

ಮುಂಬೈ: ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ತನ್ನ ಮಾಜಿ ಸಂಗಾತಿ ರಿಯಾ ಪಿಳ್ಳೈ ವಿರುದ್ಧ ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮುಂಬೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ರೂಪದರ್ಶಿ ಹಾಗೂ -ನಟಿ ರಿಯಾ ಪಿಳ್ಳೈ ಅವರು ಲಿಯಾಂಡರ್ ಪೇಸ್ ವಿರುದ್ಧ 2014 ರಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು.
ರಿಯಾ ಪಿಳ್ಳೈ ಅವರು ತಮ್ಮ ಹಂಚಿಕೆಯ ನಿವಾಸವನ್ನು ತೊರೆಯಲು ನಿರ್ಧರಿಸಿದರೆ ರೂ. 1 ಲಕ್ಷ ಮಾಸಿಕ ನಿರ್ವಹಣೆಯನ್ನು ಹೊರತುಪಡಿಸಿ ರೂ. 50,000 ಮಾಸಿಕ ಬಾಡಿಗೆಯನ್ನು ಪಾವತಿಸಲು ಲಿಯಾಂಡರ್ ಪೇಸ್‌ಗೆ ನ್ಯಾಯಾಲಯ ಸೂಚಿಸಿದೆ.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋಮಲ್ಸಿಂಗ್ ರಜಪೂತ್ ಈ ತಿಂಗಳ ಆರಂಭದಲ್ಲಿ ಆದೇಶವನ್ನು ನೀಡಿದ್ದರು. ಅದು ಬುಧವಾರ ಲಭ್ಯವಾಗಿದೆ.
ರಿಯಾ ಪಿಳ್ಳೈ ಅವರು 2014 ರಲ್ಲಿ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಪರಿಹಾರ ಮತ್ತು ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಅವರು ಎಂಟು ವರ್ಷಗಳ ಕಾಲ ಲಿಯಾಂಡರ್ ಪೇಸ್ ಅವರೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು.





