‘ಟ್ರೋಲ್ ಕಿಂಗ್ 193’ ಇನ್‌ಸ್ಟ್ರಾ ಗ್ರಾಂ ಪೇಜ್ ವಿರುದ್ಧ ಕ್ರಿಮಿನಲ್ ಪ್ರಕರಣ: ಪೇಜ್ ಅಡ್ಮಿನ್ ಪೊಲೀಸ್ ವಶಕ್ಕೆ

ಮಂಗಳೂರು, ಫೆ.25: ‘ಟ್ರೋಲ್ ಕಿಂಗ್ 193’ ಇನ್‌ಸ್ಟ್ರಾ ಗ್ರಾಂ ಪೇಜ್ ಮೂಲಕ ಧಾರ್ಮಿಕ ಕೇಂದ್ರಗಳ ಕುರಿತು ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾಡಿರುವ ಕುರಿತು ಮಂಗಳೂರಿನ ನಿವಾಸಿಯೊಬ್ಬರ ದೂರಿನ ಮೇರೆಗೆ ಪೇಜ್‌ನ ಅಡ್ಮಿನ್, ಅಪ್ರಾಪ್ತ ವಯಸ್ಸಿನ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಸುದ್ದಿಗಾರರಿಗೆ ಈ ಬಗ್ಗೆ ಇಂದು ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ತನ್ನ ಇನ್‌ಸ್ಟ್ರಾಗ್ರಾಂ ಪೇಜ್‌ನ ಮೂಲಕ ಈ 17ರ ಹರೆಯದ ಯುವಕ ಎಡಿಟ್ ಮಾಡಿದ ವೀಡಿಯೋಗಳನ್ನು ಅಪ್‌ಲೋಡ್ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದ್ದು, ಅಪ್ರಾಪ್ತ ವಯಸ್ಕ ಆಗಿರುವ ಕಾರಣ ಆತನನ್ನು ಬಾಲ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ ಎಂದರು.
ತಮ್ಮ ಸ್ನೇಹಿತರೊಂದಿಗೆ ಇನ್‌ಸ್ಟ್ರಾ ಗ್ರಾಂ ಪೇಜ್ ನೋಡುತ್ತಿದ್ದಾಗ ‘ಟ್ರೋಲ್ ಕಿಂಗ್ 193’ ಖಾತೆಯಲ್ಲಿ ಹಿಂದೂ ದೇವಾಲಯದ ಗೋಪುರದ ಮೇಲೆ ಹಸಿರು ಬಾವುಟ ಹಾರಾಟ ಮಾಡಿರುವ ಎಡಿಟ್ ಮಾಡಿದ ವೀಡಿಯೋಗಳನ್ನು ಹಾಕಿರುವುದು ಕಂಡುಬಂದಿದ್ದು, ಇದರಿಂದ ಮನಸ್ಸಿಗೆ ನೋವಾಗಿರುವುದಾಗಿ ಮಂಗಳೂರಿನ ನಿವಾಸಿಯೊಬ್ಬರು ದೂರು ನೀಡಿದ್ದರು. ಅದರಂತೆ ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ತಂಡ ಪರಿಶೀಲನೆ ನಡೆಸಿದಾಗ ಈ ಪೇಜ್ ಎಸೆಸೆಲ್ಸಿ ಫೇಲ್ ಆಗಿರುವ ಈ ಯುವಕ ಮಂಗಳೂರು ಕೊಣಾಜೆ ನಿವಾಸಿ, ಬೆಂಗಳೂರಿನಲ್ಲಿ ತರಕಾರಿ ಮಂಡಿಯಲ್ಲಿ ಕೆಲಸ ಮಾಡುತ್ತಿರುವುದು ತಿಳಿದು ಬಂದಿದೆ. ಆತನಿಗೆ ಯಾರಿಂದಲಾದರೂ ಬೆಂಬಲವಿದೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ವಿಚಾರಣೆಯ ವೇಳೆ ಈತ ಈ ಪೇಜ್‌ನಲ್ಲಿ ತಾನೇ ಈ ಪೋಸ್ಟ್‌ಗಳನ್ನು ಹಾಕಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭ ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್, ಎಸಿಪಿಗಳಾದ ನಟರಾಜ್, ಮಹೇಶ್ ಪ್ರಸಾದ್ ಉಪಸ್ಥಿತರಿದ್ದರು.