ನಿರುದ್ಯೋಗ ಕುರಿತು ವಿಪಕ್ಷಗಳ ಟೀಕೆ ನಡುವೆ, ಪ್ರಚಾರದ ವೇಳೆ ಪೂರಿ, ಪಕೋಡ ತಯಾರಿಸುತ್ತಿರುವ ಬಿಜೆಪಿ ನಾಯಕರು

Photo: ndtv.com
ಪ್ರಯಾಗರಾಜ್: ಬಿಜೆಪಿ ಸರಕಾರ ಭರವಸೆ ನೀಡಿದಂತೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿಲ್ಲ ಎಂಬ ವಿಪಕ್ಷಗಳ ಟೀಕೆಗಳ ನಡುವೆ ರಾಜ್ಯದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಲವು ಬಿಜೆಪಿ ಶಾಸಕರು ಹಾಗೂ ಸಚಿವರುಗಳು ಪ್ರಚಾರದ ಸಂದರ್ಭ ಪಕೋಡ, ಪೂರಿ, ಜಲೇಬಿ ತಯಾರಿಸಿ ತಮ್ಮ ಬೆಂಬಲಿಗರಿಗೆ ವಿತರಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಪ್ರಯಾಗರಾಜ್ ಬಿಜೆಪಿ ಶಾಸಕ ನಂದ ಗೋಪಾಲ್ ಗುಪ್ತಾ ತಮ್ಮ ಬೆಂಬಲಿಗರು ತಮ್ಮನ್ನು ಸುತ್ತುವರಿದಿರುವಂತೆಯೇ ಸ್ಥಳೀಯ ಮಾರುಕಟ್ಟೆಗಳಲ್ಲಿ ಚಹಾ ಮತ್ತು ಪಕೋಡಾ ತಯಾರಿಸುತ್ತಿರುವ ಚಿತ್ರಗಳು ಹರಿದಾಡುತ್ತಿವೆ.
"ಸಮಾಜವಾದಿ ಪಕ್ಷದ ಜನರು ನಿರುದ್ಯೋಗಿಗಳಾಗಿದ್ದಾರೆ,'' ಎಂದು ಪ್ರಯಾಗರಾಜ್ನಲ್ಲಿ ನಡೆದ ರ್ಯಾಲಿಯಲ್ಲಿ ಅವರು ಹೇಳಿದ್ದಾರೆ.
ಹೀಗೆ ಅವರ ಪ್ರಚಾರದ ಹಲವಾರು ವೀಡಿಯೋಗಳಲ್ಲಿ ಅವರು ಪೂರಿ, ಜಲೇಬಿ ಮತ್ತು ಚಹಾ ತಯಾರಿಸುತ್ತಿರುವುದು ಕಾಣಿಸುತ್ತದೆಯಲ್ಲದೆ ಅವರ ಬೆಂಬಲಿಗರು ಅವರನ್ನು ಹಾಗೂ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಹೊಗಳುತ್ತಿರುವುದು ಕೇಳಿಸುತ್ತದೆ.
ಬಿಜೆಪಿ ಸರಕಾರದ ಆಡಳಿತದ ಅವಧಿಯಲ್ಲಿ ಸಾವಿರಾರು ಜನರಿಗೆ ಉದ್ಯೋಗ ದೊರೆತಿವೆ ಹಾಗೂ ಯಾರೂ ಉದ್ಯೋಗಕ್ಕಾಗಿ ಹಣ ತೆತ್ತಿಲ್ಲ ಎಂದು ಅವರು ಹೇಳಿದ್ದಾರೆ. ತಾವು ಪಕೋಡಾ ಮುಂತಾದವುಗಳನ್ನು ತಯಾರಿಸುವುದು ಯಾವುದೇ ಪ್ರಚಾರ ತಂತ್ರವಲ್ಲ ಎಂದೂ ಅವರು ಹೇಳುತ್ತಾರೆ.
"ಜನರು ನನ್ನನ್ನು ತಮ್ಮ ಅಂಗಡಿಗಳಿಗೆ ಆಹ್ವಾನಿಸಿ, ನಂದಿ ಭಾಯಿ ನಮಗೇನಾದರೂ ಮಾಡಿ ಎನ್ನುತ್ತಾರೆ. ಜನರ ಮೇಲೆ ನಾನು ಪ್ರೀತಿ ತೋರಿಸುತ್ತಿದ್ದೇನೆ,'' ಎಂದು ಅವರು ಹೇಳಿದ್ದಾರೆ.
ಗುಪ್ತಾ ಅವರ ಸಚಿವ ಸಹೋದ್ಯೋಗಿ ಸಿದ್ಧಾರ್ಥ್ ನಾಥ್ ಸಿಂಗ್ ಅವರು ಪ್ರಯಾಗ್ರಾಜ್ನಲ್ಲಿ ಪೂರಿ ಮತ್ತು ಪಕೋಡಾ ಕಾಯಿಸುತ್ತಿರುವ ವೀಡಿಯೋಗಳೂ ಹರಿದಾಡುತ್ತಿವೆ.
"ನಾನು ಎಂಎಸ್ಎಂಇ ಸಚಿವ. ಎಷ್ಟು ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂಬ ಅಂಕಿಅಂಶಗಳನ್ನು ನೀಡಿದ್ದೇನೆ. ವಿಪಕ್ಷಗಳು ಇದು ತಪ್ಪು ಎಂದು ಯಾವತ್ತೂ ಹೇಳಿಲ್ಲ. ಕಳೆದ ಐದು ವರ್ಷಗಳಲ್ಲಿ ರೂ. 3 ಲಕ್ಷ ಕೋಟಿ ಎಂಎಸ್ಎಂಇ ಸಾಲ ನೀಡಿದ್ದೇವೆ ಹಾಗೂ 2.60 ಕೋಟಿ ಜನರಿಗೆ ಉದ್ಯೋಗ ನೀಡಿದ್ದೇವೆ,'' ಎಂದು ಅವರು ಹೇಳಿಕೊಂಡಿದ್ದಾರೆ.







