ಚೇತನ್ ರನ್ನು ಬಂಧಿಸಿ, ಈಶ್ವರಪ್ಪರನ್ನು ಬಿಟ್ಟಿದ್ದೇಕೆ: ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಪ್ರಶ್ನೆ
''ಈಶ್ವರಪ್ಪರ ದೇಶದ್ರೋಹ ಹೇಳಿಕೆಗೆ ಕೇಂದ್ರ ಸರಕಾರದ ಕುಮ್ಮಕ್ಕು ಇದೆ''

ಬೆಂಗಳೂರು, ಫೆ.25: ಸರಕಾರವು ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಹೊಸಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಅಲ್ಲದೆ, ಜನರನ್ನು ರಕ್ತಪಾತದತ್ತ ಕೊಂಡೊಯ್ಯುತ್ತಿದೆ. ಈ ನಿಟ್ಟಿನಲ್ಲಿ ಸಚಿವ ಈಶ್ವರಪ್ಪ ಹೇಳಿದ ದೇಶದ್ರೋಹ ಹೇಳಿಕೆಗೆ ಕೇಂದ್ರ ಸರಕಾರದ ಕುಮ್ಮಕ್ಕು ಇದೆ ಎಂದು ಜನತಾ ಪಕ್ಷದ ರಾಜ್ಯಾಧ್ಯಕ್ಷೆ ಡಾ. ಬಿ.ಟಿ. ಲಲಿತಾ ನಾಯಕ್ ಕಿಡಿ ಕಾರಿದ್ದಾರೆ.
ಶುಕ್ರವಾರದಂದು ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಸಂವಿಧಾನದ ಒಂದು ಭಾಗ ಎಂದೇ ಗುರುತಿಸಿದ್ದ ತ್ರಿವರ್ಣಧ್ವಜ ರಾಷ್ಟ್ರಕ್ಕೆ ಅವಶ್ಯಕತೆ ಇಲ್ಲ ಎಂಬಂತೆ ಸಚಿವ ಈಶ್ವರಪ್ಪ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಸಾಮಾನ್ಯರು ಇಂತಹ ಹೇಳಿಕೆ ನೀಡಿದ್ದರೆ, ಅವರನ್ನು ಯಾವುದೇ ಪೂರ್ವಭಾವಿ ನೋಟಿಸ್ ಇಲ್ಲದೆ ಬಂಧಿಸುತ್ತಿದ್ದರು. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ನಟ ಚೇತನ್ ಅಹಿಂಸಾ ಅವಹೇಳನಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಅವರನ್ನು ಬಂಧಿಸಿದ ಸರಕಾರ ಸಚಿವ ಈಶ್ವರಪ್ಪ ಅವರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಆರೆಸ್ಸೆಸ್ ಅಜೆಂಡಾವನ್ನು ಯಥಾವತ್ತಾಗಿ ಜಾರಿಗೊಳಿಸಲು ಹವಣಿಸುತ್ತಿರುವ ರಾಜ್ಯ ಸರಕಾರವು, ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಸಂವಿಧಾನಕ್ಕೆ ಅವಮಾನ ಮಾಡುವ ಕೆಲಸ ಮಾಡುತ್ತಿದೆ. ಸಚಿವ ಈಶ್ವರಪ್ಪ ಕೆಂಪು ಕೋಟೆಯ ಮೇಲೆ ಕೇಸರಿಧ್ವಜವನ್ನು ಹಾರಿಸುವಂತಹ ಹೇಳಿಕೆ ನೀಡಿರುವುದು ಇದಕ್ಕೆ ಸೂಕ್ತ ನಿದರ್ಶನವಾಗಿದೆ ಎಂದರು.
ಪಕ್ಷದ ಮುಖಂಡ ಕೆ.ಎಂ.ಪಾಲಾಕ್ಷ ಮಾತನಾಡಿ, ಸಚಿವ ಈಶ್ವರಪ್ಪ ನೀಡಿದ ಹೇಳಿಕೆಗಳಿಂದ ಶಿವಮೊಗ್ಗದಲ್ಲಿ ಉದ್ವಿಗ್ನ ವಾತವರಣ ಸೃಷ್ಟಿಯಾಗಿದೆ. ಯುವಕರಿಗೆ ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಅವರದ್ದೆ ಸರಕಾರ ಇರುವ ಕಾರಣ ಅವರಿಗೆ ಶಿಕ್ಷೆಯಾಗಿಲ್ಲ, ಬದಲಾಗಿ ಅವರ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಖಂಡಿಸಿದರು.
ಪಕ್ಷದ ಕಾರ್ಯಾಧ್ಯಕ್ಷ ರಫೀಕ್ ಓಕಾ ಮಾತನಾಡಿ, ಬಿಜೆಪಿ ಸರಕಾರವು ಸಂವಿಧಾನವನ್ನು ಬದಲಿಸುವ ಮಾತುಗಳನ್ನು ಹೇಳುತ್ತಾರೆ. ರಾಷ್ಟ್ರಧ್ವಜವನ್ನು ಬದಲಿಸುವ ಮಾತುಗಳನ್ನು ಹೇಳುತ್ತಿದ್ದಾರೆ. ಆದರೆ ಮುಖ್ಯಮಂತ್ರಿಗಳು ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ, ಮೌನ ವಹಿಸಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಪಕ್ಷದ ಮುಖಂಡ ನಾಗೇಶ್ ಉಪಸ್ಥಿತರಿದ್ದರು.







