10 ದಿನಗಳ ಹಿಂದೆಯಷ್ಟೇ ಉಕ್ರೇನ್ ಗೆ ತೆರಳಿದ್ದ ಉಡುಪಿಯ ವಿದ್ಯಾರ್ಥಿ ಗ್ಲೆನ್ವಿಲ್ ಮ್ಯಾಕ್ಲಿನ್
ಏರ್‌ಲಿಫ್ಟ್ ಮೂಲಕ ತಾಯ್ನಾಡಿಗೆ ಕರೆತರುವಂತೆ ಸರಕಾರಕ್ಕೆ ಹೆತ್ತವರ ಮನವಿ

ಉಡುಪಿ: ಉಡುಪಿ ತಾಲೂಕಿನ ತೋನ್ಸೆ ಗ್ರಾಮದ ಕೆಮ್ಮಣ್ಣುವಿನ ಮೆಲ್ವಿನ್ ಫೆರ್ನಾಂಡಿಸ್ ಹಾಗೂ ಐಡಾ ಫೆರ್ನಾಂಡಿಸ್ ದಂಪತಿ ಪುತ್ರ ಗ್ಲೆನ್ವಿಲ್ ಮ್ಯಾಕ್ವಿಲ್ ಫೆರ್ನಾಂಡಿಸ್, ಎಂಬಿಬಿಎಸ್ ಶಿಕ್ಷಣಕ್ಕಾಗಿ 10 ದಿನಗಳ ಹಿಂದೆಯಷ್ಟೆ ಉಕ್ರೇನ್‌ಗೆ ತೆರಳಿದ್ದು, ಇದರಿಂದ ಆತಂಕಕ್ಕೆ ಒಳಗಾಗಿರುವ ಹೆತ್ತವರು, ನಮ್ಮೆಲ್ಲರ ಮಕ್ಕಳನ್ನು ಕೂಡಲೇ ಏರ್‌ಲಿಫ್ಟ್ ಮೂಲಕ ತಾಯಾಡ್ನಿಗೆ ಸುರಕ್ಷಿತವಾಗಿ ಕರೆ ತರುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಮೆಲ್ವಿನ್ ದಂಪತಿಯ ಇಬ್ಬರು ಮಕ್ಕಳಲ್ಲಿ ಗ್ಲೆನ್ವಿಲ್ ದೊಡ್ಡವನು. ಇನ್ನೊಬ್ಬಳು ಮಗಳು ಇಲ್ಲಿ ಒಂಭತ್ತನೆ ತರಗತಿಯ ಕಲಿಯುತ್ತಿದ್ದಾಳೆ. ಫೆ.15ಕ್ಕೆ ಎಂಬಿಬಿಎಸ್ ಶಿಕ್ಷಣಕ್ಕಾಗಿ ಉಕ್ರೇನ್‌ಗೆ ಹೋಗಿರುವ ಗ್ಲಿನ್ವಿಲ್, ಮೊದಲ ದಿನ ತರಗತಿಗೆ ತೆರಳಿದ್ದಾನೆ. ಎರಡನೇ ದಿನ ಯುದ್ಧ ಆರಂಭವಾಗಿರುವುದರಿಂದ ಸದ್ಯ ಅವರೆಲ್ಲರನ್ನು ಸುರಕ್ಷಿತವಾಗಿ ಕಟ್ಟಡ ಕೆಳಗಿರುವ ಬಂಕರ್‌ನಲ್ಲಿ ಇರಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಮೆಲ್ವಿನ್ ಫೆರ್ನಾಂಡಿಸ್, ನನ್ನ ಮಗ ಉಕ್ರೇನ್‌ನ ರಾಜಧಾನಿಯಿಂದ ಸುಮಾರು 450 ಕಿ.ಮೀ. ದೂರದಲ್ಲಿ ಇದ್ದಾರೆ. ನಿನ್ನೆ ಕೆಲವು ಶಬ್ದಗಳು ಕೇಳುತ್ತಿತ್ತು. ಇದರಿಂದ ಇವರೆಲ್ಲ ಹೆದರಿ ಹೋಗಿದ್ದರು. ಇವತ್ತು ಮಾತನಾಡುವಾಗ ಸ್ವಲ್ಪ ಚೇತರಿಸಿಕೊಂಡಂತೆ ಕಾಣುತ್ತಿದ್ದಾನೆ. ಊಟ ತಿಂಡಿಗೆ ತುಂಬಾ ಕಷ್ಟ ಪಡುತ್ತಿದ್ದಾರೆ. ನಿನ್ನೆ ರಾತ್ರಿ ಊಟ ಸಿಗದೆ ತೊಂದರೆ ಅನುಭವಿಸಿದ್ದಾನೆ’ ಎಂದು ತಿಳಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಇವರೆಲ್ಲ ಹೊರಗಡೆ ಬರಲು ಆಗುತ್ತಿಲ್ಲ. ಇವರನ್ನು ಸುರಕ್ಷಿತವಾಗಿ ನೆಲದಡಿಯ ಬಂಕರ್‌ನಲ್ಲಿ ಇರಿಸಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಒಂದೇ ಕಡೆ ಇದ್ದಾರೆ. ಇದರಿಂದ ಮಲಗಲು ಆಗುತ್ತಿಲ್ಲ. ನಮಗೆ ಕೇಂದ್ರ ಸರಕಾರ ಮೇಲೆ ಸಂಪೂರ್ಣ ಭರವಸೆ ಇದೆ. ನನ್ನ ಮಗ ಮಾತ್ರವಲ್ಲ ಎಲ್ಲ ಮಕ್ಕಳು ಸುರಕ್ಷಿತವಾಗಿ ತಾಯಾಡ್ನಿಗೆ ಕರೆತಂದು ಅವರವರ ತಾಯಿಯ ಮಡಿಲಿಗೆ ಸುರಕ್ಷಿತವಾಗಿ ಒಪ್ಪಿಸುತ್ತಾರೆ ಎಂಬ ಆತ್ಮವಿಶ್ವಾಸ ನನಗೆ ಇದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಏರ್ ಲಿಫ್ಟ್ ಮಾಡಬೇಕು ಎಂದು ಅವರು ಮನವಿ ಮಾಡಿದರು.
‘ಪ್ರತಿ ಅರ್ಧಗಂಟೆಗೊಮ್ಮೆ ನಾವು ಅವನಿಗೆ ವಿಡಿಯೋ ಕಾಲ್ ಮಾಡುತ್ತಿದ್ದೇವೆ. ಹೆದರಬೇಡಿ ಎಂದು ಆತನೇ ನಮಗೆ ಧೈರ್ಯ ತುಂಬುತ್ತಿದ್ದಾನೆ. ಶಿಕ್ಷಣ ಬೇಕಾದರೆ ಮತ್ತೆ ಕೂಡ ಪಡೆಯಬಹುದು. ನನ್ನ ಮಗ ಮಾತ್ರ ಅಲ್ಲದೆ ಎಲ್ಲರೂ ಸುರಕ್ಷಿತವಾಗಿ ತಾಯ್ನಾಡಿಗೆ ಬರಲಿ ಎಂಬುದೇ ನಮ್ಮ ಆಶಯ. ಸರಕಾರ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು’ ಎಂದು ಗ್ಲೆನ್ವಿಲ್ ತಾಯಿ ಐಡಾ ಫೆರ್ನಾಂಡಿಸ್ ತಿಳಿಸಿದರು.